ಶಿವಮೊಗ್ಗ: “ಮಾನವನ ಬದುಕನ್ನು ಸುಧಾರಿಸುವಲ್ಲಿ ಮತ್ತು ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಹೋರಾಟಗಳು ಪ್ರಮುಖ ಪಾತ್ರ ವಹಿಸುತ್ತವೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಭೂಹೀನ ರೈತರಿಗೆ ಭೂಮಿ ಹಕ್ಕನ್ನು ಕೊಡಿಸಿದ ಕಾಗೋಡು ಚಳುವಳಿಯ ಆಶಯಗಳು ಇಂದಿನ ನಿತ್ಯ ಜೀವನದಲ್ಲಿಯೂ ಜೀವಂತವಾಗಿರಬೇಕು” ಎಂದು ಸಮಾಜವಾದಿ ಚಿಂತಕ ಬಿ.ಆರ್.ಜಯಂತ್ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಶಂಕರ ಮಠದಲ್ಲಿ ಡಾ. ಎಚ್. ಗಣಪತಿಯಪ್ಪ ಸೇವಾ ಟ್ರಸ್ಟ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಕಾಗೋಡು ಚಳುವಳಿಯ 75ನೇ ವರ್ಷದ ನೆನಪಿನ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ಹೋರಾಟದ ಹಾದಿ ಮತ್ತು ಪರಂಪರೆ
ಕಾಗೋಡು ಚಳುವಳಿಯ ಮಹತ್ವವನ್ನು ಸ್ಮರಿಸಿದ ಜಯಂತ್ ಅವರು, “ಭಾರತಕ್ಕೆ ಮಹಾತ್ಮಾ ಗಾಂಧೀಜಿಯವರು ಯಾವ ಮಾದರಿಯಲ್ಲಿ ಸ್ವಾತಂತ್ರ್ಯ ತಂದುಕೊಟ್ಟರೋ, ಅದೇ ಹಾದಿಯಲ್ಲಿ ರೈತರ ಭೂಮಿ ಹಕ್ಕಿಗಾಗಿ ಡಾ. ಎಚ್. ಗಣಪತಿಯಪ್ಪ ಅವರು ಕಾಗೋಡು ಚಳುವಳಿಯನ್ನು ಮುನ್ನಡೆಸಿದರು. ದೇಶದ ಉದ್ದಗಲಕ್ಕೂ ಈ ಹೋರಾಟ ಪ್ರಸರಿಸಲು ರಾಮಮನೋಹರ ಲೋಹಿಯಾ ಮತ್ತು ಶಾಂತವೇರಿ ಗೋಪಾಲಗೌಡರಂತಹ ನಾಯಕರ ಬೆಂಬಲ ಕಾರಣವಾಯಿತು. ನಂತರದ ದಿನಗಳಲ್ಲಿ ದೇವರಾಜ ಅರಸು ಮತ್ತು ಕಾಗೋಡು ತಿಮ್ಮಪ್ಪನವರು ‘ಉಳುವವನೇ ಹೊಲದೊಡೆಯ’ ಕಾಯ್ದೆಯ ಮೂಲಕ ಇದಕ್ಕೆ ತಾರ್ಕಿಕ ಅಂತ್ಯ ಹಾಡಿದರು,” ಎಂದು ಚಳುವಳಿಯ ಇತಿಹಾಸವನ್ನು ಮೆಲುಕು ಹಾಕಿದರು.

ಬಿ. ಸ್ವಾಮಿರಾವ್ ಅವರಿಗೆ ‘ನೇಗಿಲಯೋಗಿ’ ಪ್ರಶಸ್ತಿ ಪ್ರದಾನ
ಇದೇ ಸಂದರ್ಭದಲ್ಲಿ ಹೊಸನಗರದ ಮಾಜಿ ಶಾಸಕರು ಹಾಗೂ ಹಿರಿಯ ರಾಜಕೀಯ ಧುರೀಣರಾದ ಬಿ. ಸ್ವಾಮಿರಾವ್ ಅವರಿಗೆ ‘ಡಾ. ಎಚ್. ಗಣಪತಿಯಪ್ಪ ನೇಗಿಲಯೋಗಿ ರಾಜ್ಯಮಟ್ಟದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ. ಸ್ವಾಮಿರಾವ್, “ನನ್ನ ದಶಕಗಳ ಕಾಲದ ಸಾರ್ವಜನಿಕ ಬದುಕಿಗೆ ಗಣಪತಿಯಪ್ಪನಂತಹ ಮಹಾನ್ ವ್ಯಕ್ತಿಗಳೇ ಪ್ರೇರಣೆ. ಜನರ ಪರವಾಗಿ ಹೋರಾಡುವುದು ನನ್ನ ಕರ್ತವ್ಯವಾಗಿತ್ತು. ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನ್ನ ಬದುಕಿನ ಸಾರ್ಥಕ ಕ್ಷಣ. ಪ್ರತಿಯೊಬ್ಬರಿಗೂ ಭೂಮಿ ಹಕ್ಕು ಸಿಗುವವರೆಗೂ ಹೋರಾಟ ನಿರಂತರವಾಗಿರಬೇಕು,” ಎಂದು ತಿಳಿಸಿದರು.
ಸಮಾನತೆಯ ಹಾದಿಯಲ್ಲಿ ಸಾಗಲಿ ಯುವಪೀಳಿಗೆ
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, “ಕಾಗೋಡು ಚಳುವಳಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಅಂದು ರೈತ ನಾಯಕರು ಅನುಭವಿಸಿದ ಕಷ್ಟ ಮತ್ತು ನಡೆಸಿದ ಹೋರಾಟದ ಬಗ್ಗೆ ಇಂದಿನ ಯುವ ಜನಾಂಗಕ್ಕೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ,” ಎಂದರು.
ಟ್ರಸ್ಟ್ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ವಿ.ಟಿ. ಸ್ವಾಮಿ, ಶಂಕರ ಮಠದ ಧರ್ಮದರ್ಶಿ ಅಶ್ವಿನಿ ಕುಮಾರ್, ಉದ್ಯಮಿ ಟಿ.ವಿ. ಪಾಂಡುರಂಗ, ರೈತ ಹೋರಾಟಗಾರ ತೀ.ನಾ. ಶ್ರೀನಿವಾಸ್, ಹಿರಿಯ ಪತ್ರಕರ್ತ ಜಿ. ನಾಗೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ನಮನ: ಕಾರ್ಯಕ್ರಮದ ವಿಶೇಷತೆಯಾಗಿ ಹಿರಿಯ ಗಾಯಕ ವಸಂತ್ ಕುಗ್ವೆ ಹಾಗೂ ರಾಜು ಜನ್ನೆಹಕ್ಕಲು ಅವರು ಕ್ರಾಂತಿಕಾರಿ ಹೋರಾಟದ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದವರಲ್ಲಿ ಕಿಚ್ಚು ಹಚ್ಚಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಸಾಗರದ ಮಾರಿಕಾಂಬಾ ರುದ್ರಭೂಮಿಯಲ್ಲಿ ವಿವಿಧ ಸಂಘಟನೆಗಳಿಂದ ಶ್ರಮದಾನ: ಸ್ವಚ್ಛತೆಗೆ ಸಾರ್ವಜನಿಕರಿಗೆ ಮನವಿ
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
ನಿಮ್ಮ ಮೇಲಿನ ಆರೋಪ ಸುಳ್ಳಾಗಲಿ: ತಂದೆ ವಿನಯ್ ಕುಲಕರ್ಣಿ ಪರ ಪುತ್ರಿ ವೈಶಾಲಿ ಭಾವನಾತ್ಮಕ ಪೋಸ್ಟ್!








