ಅಮರಾವತಿ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರು ಶನಿವಾರ ಸಂಜೆ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಪ್ರಸ್ತುತ ಅವರು ಸ್ಥಿರವಾಗಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಬೆಳಿಗ್ಗೆ ಅಧಿಕಾರಿಗಳೊಂದಿಗೆ ಆಡಳಿತಾತ್ಮಕ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ಪವನ್ ಕಲ್ಯಾಣ್ ಅವರು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಪರೀಕ್ಷಿಸಿದ ವೈದ್ಯರು, ಎಂಆರ್ಐ (MRI) ಸ್ಕ್ಯಾನ್ ನಡೆಸಿದ ಬಳಿಕ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಸೂಚಿಸಿದರು.
ವೈದ್ಯರ ಸಲಹೆಯಂತೆ ಶನಿವಾರ ಸಂಜೆಯೇ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅದು ಯಶಸ್ವಿಯಾಗಿದೆ ಎಂದು ಅವರ ರಾಜಕೀಯ ಕಾರ್ಯದರ್ಶಿ ಪಿ. ಹರಿ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂಬ ವಿವರವನ್ನು ಗೌಪ್ಯವಾಗಿಡಲಾಗಿದೆ.
ಶಸ್ತ್ರಚಿಕಿತ್ಸೆಯ ನಂತರ ಪವನ್ ಕಲ್ಯಾಣ್ ಅವರಿಗೆ ಕನಿಷ್ಠ 7 ರಿಂದ 10 ದಿನಗಳ ಕಾಲ ಸಂಪೂರ್ಣ ಬೆಡ್ ರೆಸ್ಟ್ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮುಂದಿನ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ಸದ್ಯಕ್ಕೆ ರದ್ದುಗೊಳಿಸಲಾಗಿದೆ.








