ನವದೆಹಲಿ: ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಬಳಿ ಭಾರತದ ಧ್ವಜ ಹೊಂದಿರುವ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ನೌಕಾಪಡೆ ಗುಂಡಿನ ದಾಳಿ ನಡೆಸಿದ ಬೆನ್ನಲ್ಲೇ, ಇರಾನ್ ರಾಯಭಾರಿ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಆಕಸ್ಮಿಕ ಘಟನೆಯ ಹೊರತಾಗಿಯೂ “ಭಾರತ ಮತ್ತು ಇರಾನ್ ನಡುವಿನ ಸಂಬಂಧ ಅತ್ಯಂತ ಸುದೃಢವಾಗಿದೆ” ಎಂದು ತಹ್ರಾನ್ ಪ್ರತಿನಿಧಿ ತಿಳಿಸಿದ್ದಾರೆ.
ಶನಿವಾರದಂದು ಇರಾನ್ ನೌಕಾಪಡೆಯು ಇರಾಕ್‌ನಿಂದ ತೈಲ ಹೊತ್ತು ಬರುತ್ತಿದ್ದ ‘ಜಗ್ ಅರ್ನವ್’ ಮತ್ತು ‘ಸನ್ಮಾರ್ ಹೆರಾಲ್ಡ್’ ಎಂಬ ಎರಡು ಭಾರತೀಯ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿತು. ಈ ಘಟನೆಯು ಓಮನ್ ಸಮುದ್ರದ ಉತ್ತರ ಭಾಗದಲ್ಲಿ ಸಂಭವಿಸಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಭಾರತದ ವಿದೇಶಾಂಗ ಸಚಿವಾಲಯವು (MEA), ತಕ್ಷಣವೇ ಇರಾನ್ ರಾಯಭಾರಿಯನ್ನು ಕರೆಸಿ ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತು. ಭಾರತೀಯ ನಾವಿಕರು ಮತ್ತು ಹಡಗುಗಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ, ಇಂತಹ ಕೃತ್ಯಗಳು ಅಂತರಾಷ್ಟ್ರೀಯ ನೌಕಾಯಾನ ನಿಯಮಗಳಿಗೆ ವಿರುದ್ಧವೆಂದು ಹೇಳಿದೆ.
ಭಾರತದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಇರಾನ್ ರಾಯಭಾರಿ ಮೊಹಮ್ಮದ್ ಫತಲಿ, “ಭಾರತವು ನಮ್ಮ ಆತ್ಮೀಯ ದೇಶವಾಗಿದೆ. ಈ ಪ್ರಾಂತ್ಯದಲ್ಲಿ ಎರಡೂ ದೇಶಗಳು ಸಮಾನ ಹಿತಾಸಕ್ತಿಗಳನ್ನು ಹೊಂದಿವೆ. ಶೀಘ್ರದಲ್ಲೇ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದ್ದಾರೆ.








