ಲಕ್ನೋ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ದ್ವಿಪೌರತ್ವ ಪ್ರಕರಣದಲ್ಲಿ ದೆಹಲಿ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಹೈಕೋರ್ಟ್ ಆದೇಶಕ್ಕೆ ಈಗ ತಡೆ ಬಿದ್ದಿದೆ. ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ (FIR) ದಾಖಲಿಸುವಂತೆ ಶುಕ್ರವಾರ ನೀಡಿದ್ದ ತನ್ನದೇ ಆದೇಶವನ್ನು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಶನಿವಾರ ಸಂಜೆ ಅಮಾನತ್ತಿನಲ್ಲಿಟ್ಟಿದೆ (Stay).
“ಯಾವುದೇ ವ್ಯಕ್ತಿಯ ವಿರುದ್ಧ ನೋಟಿಸ್ ನೀಡದೆ ಅಥವಾ ಅವರ ವಾದವನ್ನು ಕೇಳದೆ ಕ್ರಮ ಕೈಗೊಳ್ಳುವುದು ಸರಿಯಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಎದುರುದಾರರ (ರಾಹುಲ್ ಗಾಂಧಿ) ವಾದವನ್ನು ಕೇಳದೆಯೇ ತನಿಖೆಗೆ ಆದೇಶಿಸುವುದು ನ್ಯಾಯೋಚಿತವಲ್ಲ ಎಂದು ಪೀಠವು ಹೇಳಿದೆ.
ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂದು ಆರೋಪಿಸಿ ಕರ್ನಾಟಕದ ಬಿಜೆಪಿ ಕಾರ್ಯಕರ್ತ ವಿಘ್ನೇಶ್ ಶಿಶಿರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರ ಪೀಠವು ನಿನ್ನೆ (ಶುಕ್ರವಾರ) ಎಫ್‌ಐಆರ್ ದಾಖಲಿಸಲು ಸೂಚಿಸಿತ್ತು.
ಶನಿವಾರ ಸಂಜೆ ಪ್ರಕರಣದ ಮರುಪರಿಶೀಲನೆ ನಡೆಸಿದ ಕೋರ್ಟ್, ಅಂತಿಮ ತೀರ್ಪು ನೀಡುವ ಮುನ್ನ ಪ್ರತಿವಾದಿಗಳ ವಾದ ಆಲಿಸುವುದು ಅತ್ಯಗತ್ಯ ಎಂದು ಹೇಳಿ, ಎಫ್‌ಐಆರ್ ಪ್ರಕ್ರಿಯೆಗೆ ತಡೆ ನೀಡಿದೆ.








