ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಇರಾನ್ ಪ್ರಭಾವವನ್ನು ಹತ್ತಿಕ್ಕಲು ನಿರ್ಧರಿಸಿರುವ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಈಗ ಇರಾಕ್‌ನಲ್ಲಿ ಕಾರ್ಯಾಚರಿಸುತ್ತಿರುವ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಅಮೆರಿಕದ ಸಿಬ್ಬಂದಿ ಮತ್ತು ಹಿತಾಸಕ್ತಿಗಳ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಇರಾಕ್‌ನ ಏಳು ಪ್ರಮುಖ ಮಿಲಿಟರಿ ಕಮಾಂಡರ್‌ಗಳ ಮೇಲೆ ಅಮೆರಿಕವು ಆರ್ಥಿಕ ನಿರ್ಬಂಧಗಳನ್ನು ಹೇರಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕಟೈಬ್ ಹಿಜ್ಬುಲ್ಲಾ, ಹರಕತ್ ಅಲ್-ನುಜಾಬಾ ಮತ್ತು ಅಸೈಬ್ ಅಹ್ಲ್ ಅಲ್-ಹಕ್ ಸೇರಿದಂತೆ ವಿವಿಧ ಸಶಸ್ತ್ರ ಗುಂಪುಗಳ ನಾಯಕರನ್ನು ಗುರಿಯಾಗಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.
ಈಕಮಾಂಡರ್‌ಗಳು ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳು ಮತ್ತು ರಾಯಭಾರ ಕಚೇರಿಗಳ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ಯೋಜಿಸಿದ್ದರು ಮತ್ತು ಕಾರ್ಯಗತಗೊಳಿಸಿದ್ದರು ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.
ಈ ನಿರ್ಬಂಧದ ಅಡಿಯಲ್ಲಿ, ಸದರಿ ಏಳು ಕಮಾಂಡರ್‌ಗಳು ಅಮೆರಿಕದಲ್ಲಿ ಹೊಂದಿರುವ ಯಾವುದೇ ಆಸ್ತಿ ಅಥವಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಅಲ್ಲದೆ, ಅಮೆರಿಕದ ಯಾವುದೇ ಪ್ರಜೆ ಅಥವಾ ಕಂಪನಿಗಳು ಇವರೊಂದಿಗೆ ವ್ಯವಹಾರ ನಡೆಸುವುದನ್ನು ನಿಷೇಧಿಸಲಾಗಿದೆ.








