ನವದೆಹಲಿ: ಸಂಸತ್ತಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ (NDA) ಸರ್ಕಾರಕ್ಕೆ ದೊಡ್ಡ ರಾಜಕೀಯ ಹಿನ್ನಡೆಯಾಗಿದೆ. ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ‘ಮಹಿಳಾ ಮೀಸಲಾತಿ’ ಮತ್ತು ‘ಕ್ಷೇತ್ರ ಮರುವಿಂಗಡಣೆ’ ಮಸೂದೆಗಳಿಗೆ ಸಂಸತ್ತಿನಲ್ಲಿ ಅಗತ್ಯವಿದ್ದ ಮೂರನೇ ಎರಡರಷ್ಟು (2/3) ಬಹುಮತ ಪಡೆಯಲು ಸರ್ಕಾರ ವಿಫಲವಾಗಿದೆ. ಈ ಬೆಳವಣಿಗೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಗೆಲುವು” ಎಂದು ಬಣ್ಣಿಸಿದ್ದಾರೆ.
ಸಂವಿಧಾನ ತಿದ್ದುಪಡಿ ಮಸೂದೆಯಾಗಿದ್ದರಿಂದ ಇದನ್ನು ಅಂಗೀಕರಿಸಲು ಕನಿಷ್ಠ ಶೇ. 66 ರಷ್ಟು ಸದಸ್ಯರ ಬೆಂಬಲ ಬೇಕಿತ್ತು. ಆದರೆ, ವಿರೋಧ ಪಕ್ಷಗಳ ಒಗ್ಗಟ್ಟಿನ ಹೋರಾಟದಿಂದಾಗಿ ಮಸೂದೆಯು ಈ ಗಡಿಯನ್ನು ದಾಟಲು ಸಾಧ್ಯವಾಗದೆ ಪತನಗೊಂಡಿತು. ಮಸೂದೆಯು ಸಂಸತ್ತಿನ ಅಂಗಳದಲ್ಲಿ ಬಿದ್ದುಹೋಗುತ್ತಿದ್ದಂತೆಯೇ ಎನ್‌ಡಿಎ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಸೂದೆ ವಿಫಲವಾದ ಹಿನ್ನೆಲೆಯಲ್ಲಿ ಎನ್‌ಡಿಎ ಸಂಸದರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ವಿರೋಧ ಪಕ್ಷಗಳು ಮಹಿಳಾ ವಿರೋಧಿ ಧೋರಣೆ ತಳೆದಿವೆ ಮತ್ತು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿವೆ ಎಂದು ಘೋಷಣೆಗಳನ್ನು ಕೂಗಿದರು.
ಈ ಫಲಿತಾಂಶವನ್ನು ಸ್ವಾಗತಿಸಿದ ರಾಹುಲ್ ಗಾಂಧಿ, “ಇದು ಕೇವಲ ನಮ್ಮ ಗೆಲುವಲ್ಲ, ಈ ದೇಶದ ಧ್ವನಿಯ ಗೆಲುವು. ಸರ್ಕಾರವು ತನಗೆ ಬೇಕಾದಂತೆ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ” ಎಂದು ಸಂಭ್ರಮಿಸಿದರು.
ದಕ್ಷಿಣ ಭಾರತದ ರಾಜ್ಯಗಳಿಗೆ ಕ್ಷೇತ್ರ ಮರುವಿಂಗಡಣೆಯಿಂದ ಆಗಬಹುದಾದ ಅನ್ಯಾಯದ ಬಗ್ಗೆ ವಿರೋಧ ಪಕ್ಷಗಳು ಎತ್ತಿದ್ದ ಆಕ್ಷೇಪವೇ ಈ ಮಸೂದೆ ಪತನಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.






