ನವದೆಹಲಿ: ಕೋಟ್ಯಂತರ ರೂಪಾಯಿಗಳ ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಈಗ ದೊಡ್ಡ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ‘ಮಹಾ ವಂಚಕ’ ಸುಕೇಶ್ ಚಂದ್ರಶೇಖರ್ ವಿರುದ್ಧದ ಪ್ರಕರಣದಲ್ಲಿ ಜಾಕ್ವೆಲಿನ್ ಈಗ ‘ಅಪ್ರೂವರ್’ (Approver) ಅಥವಾ ಸರ್ಕಾರಿ ಸಾಕ್ಷಿಯಾಗಿ ಬದಲಾಗಲು ನಿರ್ಧರಿಸಿದ್ದಾರೆ.
ಈವರೆಗೆ ಈ ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಿಕೊಂಡಿದ್ದ ಜಾಕ್ವೆಲಿನ್, ಈಗ ಸುಕೇಶ್ ಎಸಗಿರುವ ಅಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಮತ್ತು ಆತನ ವಿರುದ್ಧ ಸಾಕ್ಷಿ ನುಡಿಯಲು ಒಪ್ಪಿಕೊಂಡಿದ್ದಾರೆ.
ಜಾಕ್ವೆಲಿನ್ ಅವರು ಅಪ್ರೂವರ್ ಆಗಲು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯವು ಪರಿಶೀಲಿಸುತ್ತಿದೆ. ಒಂದು ವೇಳೆ ನ್ಯಾಯಾಲಯ ಇದಕ್ಕೆ ಅನುಮತಿ ನೀಡಿದರೆ, ಜಾಕ್ವೆಲಿನ್ ಅವರ ಮೇಲಿರುವ ಆರೋಪಗಳು ಸಡಿಲಗೊಳ್ಳುವ ಅಥವಾ ಅವರಿಗೆ ಶಿಕ್ಷೆಯಿಂದ ವಿನಾಯಿತಿ ಸಿಗುವ ಸಾಧ್ಯತೆ ಇದೆ.
ಸುಕೇಶ್ ಚಂದ್ರಶೇಖರ್ ತನಗೆ ನೀಡಿದ ದುಬಾರಿ ಉಡುಗೊರೆಗಳು ಮತ್ತು ಹಣದ ವ್ಯವಹಾರದ ಬಗ್ಗೆ ಜಾಕ್ವೆಲಿನ್ ಅವರು ತನಿಖಾ ಸಂಸ್ಥೆಗಳಿಗೆ (ED) ಸತ್ಯ ಸಂಗತಿಗಳನ್ನು ಬಹಿರಂಗಪಡಿಸಲಿದ್ದಾರೆ. ಇದು ಸುಕೇಶ್‌ಗೆ ಕಾನೂನುಬದ್ಧವಾಗಿ ದೊಡ್ಡ ಹಿನ್ನಡೆಯಾಗಲಿದೆ.






