ನ್ಯೂಯಾರ್ಕ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಗಳ ಬಗ್ಗೆ ಭಾರತವು ವಿಶ್ವಸಂಸ್ಥೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದೆ. “ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವುದು ಮತ್ತು ಅಮಾಯಕ ಸಿಬ್ಬಂದಿಗಳ ಜೀವಕ್ಕೆ ಅಪಾಯ ತರುವುದು ಕಿಂಚಿತ್ತೂ ಸ್ವೀಕಾರಾರ್ಹವಲ್ಲ” ಎಂದು ಭಾರತದ ಖಾಯಂ ಪ್ರತಿನಿಧಿ ಅಂಬಾಸಿಡರ್ ಪರ್ವತನೇನಿ ಹರೀಶ್ ಖಡಕ್ ಆಗಿ ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿಯು ಭಾರತದ ಇಂಧನ ಮತ್ತು ಆರ್ಥಿಕ ಭದ್ರತೆಗೆ ಅತ್ಯಂತ ನಿರ್ಣಾಯಕವಾಗಿದೆ. ಈ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸುವುದು ಜಾಗತಿಕ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಭಾರತ ಎಚ್ಚರಿಸಿದೆ.
ಅಂತರಾಷ್ಟ್ರೀಯ ಜಲಪ್ರದೇಶಗಳಲ್ಲಿ ಹಡಗುಗಳ ಮುಕ್ತ ಮತ್ತು ಸುರಕ್ಷಿತ ಸಂಚಾರವನ್ನು ತಕ್ಷಣವೇ ಮರುಸ್ಥಾಪಿಸಬೇಕು. ಅಂತರಾಷ್ಟ್ರೀಯ ಕಾನೂನುಗಳನ್ನು ಎಲ್ಲಾ ರಾಷ್ಟ್ರಗಳು ಗೌರವಿಸಬೇಕು ಎಂದು ಭಾರತ ಒತ್ತಾಯಿಸಿದೆ.
ಸಂಘರ್ಷದಲ್ಲಿ ಭಾರತೀಯ ನಾವಿಕರು ಜೀವ ಕಳೆದುಕೊಂಡಿರುವುದಕ್ಕೆ ಸಂತಾಪ ಸೂಚಿಸಿದ ಭಾರತ, ನಾಗರಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಮತ್ತು ಪ್ರಚೋದನಾಕಾರಿ ಕ್ರಮಗಳಿಂದ ದೂರವಿರುವಂತೆ ಎಲ್ಲಾ ದೇಶಗಳಿಗೆ ಕರೆ ನೀಡಿದೆ.








