ತೆಲಂಗಾಣದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ದಂಪತಿಗಳ ನಡುವಿನ ಕಲಹವು ಹಸುಗೂಸಿನ ಜೀವವನ್ನೇ ಬಲಿಪಡೆದ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಭುವನಗಿರಿ ಮಂಡಲದ ಹನ್ಮಾಪುರ ಗ್ರಾಮದಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ:
ಹನ್ಮಾಪುರ ಗ್ರಾಮದ ಶ್ರೀರಾಮುಲು ಎಂಬುವವರು ಕಿವುಡು ಮತ್ತು ಮೂಗ (ದಿವ್ಯಾಂಗ) ವ್ಯಕ್ತಿಯಾಗಿದ್ದು, ಮೂರು ವರ್ಷಗಳ ಹಿಂದೆ ಹೈದರಾಬಾದ್‌ನ ನಾಗಮಣಿ ಎಂಬವರೊಂದಿಗೆ ವಿವಾಹವಾಗಿದ್ದರು. ನಾಗಮಣಿ ಕೂಡ ದಿವ್ಯಾಂಗರಾಗಿದ್ದರು. ಈ ದಂಪತಿಗೆ ನಿತ್ಯಶ್ರೀ ಎಂಬ ಎರಡು ವರ್ಷದ ಮುದ್ದಾದ ಮಗಳಿದ್ದಳು. ಮನೆಯ ತುಂಬೆಲ್ಲಾ ಓಡಾಡುತ್ತಾ ತಂದೆ-ತಾಯಿಯ ಕಣ್ಣಿನ ಮಣಿಯಾಗಿದ್ದ ಆ ಮಗು ಈಗ ಹೆಣವಾಗಿರುವುದು ಗ್ರಾಮಸ್ಥರ ಕಣ್ಣಲ್ಲಿ ನೀರು ತರಿಸಿದೆ.
ಜಗಳವೇ ಮುಳುವಾಯಿತು:
ಕಳೆದ ಕೆಲವು ಸಮಯದಿಂದ ದಂಪತಿಗಳ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆಗಳು ನಡೆಯುತ್ತಿದ್ದವು. ಈ ಕಾರಣಕ್ಕೆ ನಾಗಮಣಿ ಮಗಳೊಂದಿಗೆ ತನ್ನ ತವರು ಮನೆಗೆ ತೆರಳಿದ್ದರು. ಆದರೆ ಯುಗಾದಿ ಹಬ್ಬದ ಸಂದರ್ಭದಲ್ಲಿ ಹಿರಿಯರು ಬುದ್ಧಿವಾದ ಹೇಳಿ ಮರಳಿ ಪತಿ ಶ್ರೀರಾಮುಲು ಬಳಿಗೆ ಕಳುಹಿಸಿಕೊಟ್ಟಿದ್ದರು.
ಆದರೆ ಮಗು ನಿತ್ಯಶ್ರೀ ತನ್ನ ಅಜ್ಜ ಮಲ್ಲಯ್ಯನ ನೆನಪಲ್ಲಿ ಸದಾ ಅಳುತ್ತಿದ್ದಳು. ಇದೇ ಸಮಯದಲ್ಲಿ ಮತ್ತೆ ದಂಪತಿಗಳ ನಡುವೆ ಜಗಳ ತಾರಕಕ್ಕೇರಿತ್ತು. ವಿಷಯ ತಿಳಿದ ನಾಗಮಣಿಯ ತಂದೆ ಮಲ್ಲಯ್ಯ, ತನ್ನ ಮಗಳು ಮತ್ತು ಮೊಮ್ಮಗಳನ್ನು ಕರೆದೊಯ್ಯಲು ಹನ್ಮಾಪುರಕ್ಕೆ ಬಂದಿದ್ದರು.
ಕ್ರೂರ ಕೃತ್ಯ:
ಮಗು ನಿತ್ಯಶ್ರೀ ಓಡಿಹೋಗಿ ಅಜ್ಜ ಮಲ್ಲಯ್ಯನ ಮಡಿಲಲ್ಲಿ ಕುಳಿತಿದ್ದನ್ನು ನೋಡಿ ಶ್ರೀರಾಮುಲುಗೆ ವಿಪರೀತ ಕೋಪ ಬಂದಿದೆ. ತನ್ನ ಮಗಳು ತನ್ನ ಬಳಿ ಬಾರದೆ ಅಜ್ಜನ ಬಳಿ ಹೋಗಿದ್ದಾಳೆಂಬ ಅಸೂಯೆ ಮತ್ತು ಹೆಂಡತಿಯ ಮೇಲಿನ ಸಿಟ್ಟಿನಿಂದ ಶ್ರೀರಾಮುಲು ಮಗುವನ್ನು ತನ್ನ ಬೈಕ್ ಮೇಲೆ ಗ್ರಾಮದ ಹೊರವಲಯದ ಕೆರೆಯ ಬಳಿ ಕರೆದೊಯ್ದಿದ್ದಾನೆ. ಅಲ್ಲಿ ಅಜ್ಜನ ಹತ್ತಿರ ಹೋಗಬೇಕೆಂದು ಮಗು ಅಳುತ್ತಿದ್ದಾಗ, ಉದ್ರಿಕ್ತಗೊಂಡ ತಂದೆ ಮಗುವಿನ ಮೂಗು ಮತ್ತು ಬಾಯಿಯನ್ನು ಬಲವಾಗಿ ಒತ್ತಿ ಹಿಡಿದಿದ್ದಾನೆ. ಉಸಿರುಗಟ್ಟಿ ಚಡಪಡಿಸಿದ ಪುಟ್ಟ ಕಂದಮ್ಮ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಕೃತ್ಯ ಎಸಗಿದ ಬಳಿಕ ಶ್ರೀರಾಮುಲು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.








