ನವದೆಹಲಿ:ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಂಡಿಸುತ್ತಿರುವ ‘ಕ್ಷೇತ್ರ ಪುನರ್ವಿಂಗಡಣೆ ಮಸೂದೆ-2026’ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ (PoK) ಸಂಬಂಧಿಸಿದಂತೆ ಅತ್ಯಂತ ಮಹತ್ವದ ಹಾಗೂ ಭವಿಷ್ಯದ ದೃಷ್ಟಿಯ ಕಾನೂನು ಅಂಶಗಳನ್ನು ಸೇರಿಸಲಾಗಿದೆ. “ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ” ಎಂಬ ದೇಶದ ದೀರ್ಘಕಾಲದ ನಿಲುವನ್ನು ಈ ಮಸೂದೆಯು ಮತ್ತಷ್ಟು ಗಟ್ಟಿಗೊಳಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶಗಳು ಪಾಕಿಸ್ತಾನದ ಆಕ್ರಮಣದಿಂದ ಮುಕ್ತವಾದ ತಕ್ಷಣವೇ (Ceases to be occupied), ಆ ಭಾಗಗಳಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಡೆಸಿ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗಕ್ಕೆ ಈ ಮಸೂದೆಯು ಅಧಿಕಾರ ನೀಡುತ್ತದೆ.
ಜಮ್ಮು-ಕಾಶ್ಮೀರ ಅಸೆಂಬ್ಲಿ ಸ್ಥಾನಗಳ ಹೆಚ್ಚಳ: ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ 114 ಸ್ಥಾನಗಳಿದ್ದು, ಅದರಲ್ಲಿ 24 ಸ್ಥಾನಗಳನ್ನು PoK ಗಾಗಿ ಖಾಲಿ ಬಿಡಲಾಗಿದೆ. ಹೊಸ ಮಸೂದೆಯು ಈ ಸ್ಥಾನಗಳ ಸಂಖ್ಯೆಯನ್ನು ಪುನರ್ವಿಮರ್ಶಿಸಲು ಮತ್ತು ಅಗತ್ಯವಿದ್ದರೆ ಹೆಚ್ಚಿಸಲು ಕ್ಷೇತ್ರ ಪುನರ್ವಿಂಗಡಣೆ ಆಯೋಗಕ್ಕೆ ಮುಕ್ತ ಅವಕಾಶ ನೀಡಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಒಟ್ಟು 7 ಸದಸ್ಯರನ್ನು ನಾಮನಿರ್ದೇಶನ ಮಾಡಲು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಒಂದು ಸ್ಥಾನವನ್ನು ಪಾಕ್ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಗಾಗಿ (PoJK Refugees) ಮೀಸಲಿಡಲು ಸರ್ಕಾರ ನಿರ್ಧರಿಸಿದೆ.
ಲೋಕಸಭಾ ಸ್ಥಾನಗಳು: ಜಮ್ಮು ಮತ್ತು ಕಾಶ್ಮೀರಕ್ಕೆ ಸದ್ಯ ಇರುವ 5 ಲೋಕಸಭಾ ಸ್ಥಾನಗಳನ್ನು 7 ಕ್ಕೆ ಏರಿಸುವ ಸಾಧ್ಯತೆಯಿದ್ದು, ಇದರ ವ್ಯಾಪ್ತಿಯಲ್ಲಿ PoK ಭಾಗಗಳನ್ನೂ ಸೇರಿಸುವ ಕುರಿತು ಚರ್ಚೆ ನಡೆಯುತ್ತಿದೆ.








