ನ್ಯೂಯಾರ್ಕ್:ವಿಶ್ವದ ಅತ್ಯಂತ ಪ್ರಭಾವಶಾಲಿ 100 ವ್ಯಕ್ತಿಗಳ 2026ನೇ ಸಾಲಿನ ಪಟ್ಟಿಯನ್ನು ‘ಟೈಮ್’ (TIME) ನಿಯತಕಾಲಿಕ ಬುಧವಾರ ಬಿಡುಗಡೆ ಮಾಡಿದೆ. ಈ ಪ್ರತಿಷ್ಠಿತ ಪಟ್ಟಿಯಲ್ಲಿ ತಂತ್ರಜ್ಞಾನ, ಸಿನಿಮಾ ಮತ್ತು ಪಾಕಪ್ರವೀಣ ಕ್ಷೇತ್ರಗಳಲ್ಲಿ ಭಾರತದ ಹೆಸರು ಜಾಗತಿಕ ಮಟ್ಟದಲ್ಲಿ ರಾರಾಜಿಸುತ್ತಿದೆ. ಗೂಗಲ್ ಸಿಇಒ ಸುಂದರ್ ಪಿಚೈ, ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಖ್ಯಾತ ಶೆಫ್ ವಿಕಾಸ್ ಖನ್ನಾ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಸುಂದರ್ ಪಿಚೈ (ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ): ಕೃತಕ ಬುದ್ಧಿಮತ್ತೆಯನ್ನು (AI) ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಪಿಚೈ ಅವರ ಪಾತ್ರವನ್ನು ಟೈಮ್ಸ್ ಶ್ಲಾಘಿಸಿದೆ. ಜೆಮಿನಿ (Gemini) ಮತ್ತು ಎಐ ಸ್ಟುಡಿಯೋಗಳಂತಹ ನವೀನ ಉತ್ಪನ್ನಗಳ ಮೂಲಕ ಗೂಗಲ್ ಅನ್ನು ಮುನ್ನಡೆಸುತ್ತಿರುವ ಅವರ ಶೈಲಿಯನ್ನು “ತಂತ್ರಜ್ಞಾನದ ವಾಸ್ತುಶಿಲ್ಪಿ” ಎಂದು ಬಣ್ಣಿಸಲಾಗಿದೆ.
ರಣಬೀರ್ ಕಪೂರ್ (ನಟ): ಈ ಬಾರಿಯ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ರಣಬೀರ್. ಭಾರತೀಯ ಚಿತ್ರರಂಗದಲ್ಲಿ ಕೇವಲ ಗಲ್ಲಾಪೆಟ್ಟಿಗೆಯ ಅಂಕಿ-ಅಂಶಗಳಿಗಿಂತ ಮೀರಿ, ಭಾವನಾತ್ಮಕವಾಗಿ ಕಥೆ ಹೇಳುವ ಅವರ ಅಭಿನಯದ ಶೈಲಿಯನ್ನು ಆಯುಷ್ಮಾನ್ ಖುರಾನಾ ಅವರು ತಮ್ಮ ಬರಹದಲ್ಲಿ ಕೊಂಡಾಡಿದ್ದಾರೆ.
ವಿಕಾಸ್ ಖನ್ನಾ (ಮಿಚೆಲಿನ್ ಸ್ಟಾರ್ ಶೆಫ್): ಭಾರತೀಯ ಆಹಾರ ಸಂಸ್ಕೃತಿಯನ್ನು ಜಾಗತಿಕ ವೇದಿಕೆಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಕ್ಕಾಗಿ ವಿಕಾಸ್ ಖನ್ನಾ ಅವರನ್ನು ಗುರುತಿಸಲಾಗಿದೆ. ಅವರ ‘ಬಂಗ್ಲೋ’ (Bungalow) ರೆಸ್ಟೋರೆಂಟ್ ಕೇವಲ ಆಹಾರ ಕೇಂದ್ರವಲ್ಲ, ಬದಲಾಗಿ ಭಾರತದ ಪರಂಪರೆಯನ್ನು ಸಾರುವ ಕಥಾ ವೇದಿಕೆ ಎಂದು ಶ್ಲಾಘಿಸಲಾಗಿದೆ.
ನೀಲ್ ಮೋಹನ್ (ಯೂಟ್ಯೂಬ್ ಸಿಇಒ): ಯೂಟ್ಯೂಬ್ ಮುಖ್ಯಸ್ಥರಾಗಿ ಡಿಜಿಟಲ್ ಕ್ರಾಂತಿಯಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಭಾರತೀಯ ಮೂಲದ ನೀಲ್ ಮೋಹನ್ ಅವರೂ ಈ ಪಟ್ಟಿಯಲ್ಲಿದ್ದಾರೆ.
ಜೋಹ್ರಾನ್ ಮಮ್ದಾನಿ (ನ್ಯೂಯಾರ್ಕ್ ಸಿಟಿ ಮೇಯರ್): ರಾಜಕೀಯ ಕ್ಷೇತ್ರದಲ್ಲಿ ಪ್ರಭಾವ ಬೀರುತ್ತಿರುವ ಭಾರತೀಯ ಮೂಲದ ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಅವರ ಹೆಸರನ್ನೂ ಟೈಮ್ಸ್ ಪಟ್ಟಿ ಮಾಡಿದೆ.
ಜಾಗತಿಕ ಮಟ್ಟದ ಇತರ ಪ್ರಮುಖರು:
ಈ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಅವರಂತಹ ಘಟಾನುಘಟಿ ನಾಯಕರಿದ್ದಾರೆ.








