ನವದೆಹಲಿ:ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕ ಎನ್ನಲಾದ ಮೂರು ದಿನಗಳ ಸಂಸತ್ತಿನ ವಿಶೇಷ ಅಧಿವೇಶನವು ಇಂದು (ಏಪ್ರಿಲ್ 16) ಆರಂಭವಾಗುತ್ತಿದೆ. ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ‘ಕ್ಷೇತ್ರ ಪುನರ್ವಿಂಗಡಣೆ’ (Delimitation) ಮತ್ತು ‘ಮಹಿಳಾ ಮೀಸಲಾತಿ’ಯನ್ನು ಶೀಘ್ರವಾಗಿ ಜಾರಿಗೆ ತರುವ ಪ್ರಮುಖ ಮಸೂದೆಗಳನ್ನು ಸರ್ಕಾರ ಈ ಅಧಿವೇಶನದಲ್ಲಿ ಮಂಡಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಲ್ಲಾ ಸಂಸದರಿಗೆ ಅಧಿವೇಶನದ ಉದ್ದಕ್ಕೂ ಹಾಜರಿರುವಂತೆ ‘ತ್ರೀ-ಲೈನ್ ವಿಪ್’ (Whip) ಜಾರಿಗೊಳಿಸಿದೆ.ಪ್ರಸ್ತಾವಿತ ‘ಸಂವಿಧಾನದ 131ನೇ ತಿದ್ದುಪಡಿ ಮಸೂದೆ’ಯ ಪ್ರಕಾರ, ಲೋಕಸಭೆಯ ಒಟ್ಟು ಸ್ಥಾನಗಳನ್ನು ಸದ್ಯ ಇರುವ 543 ರಿಂದ 850ಕ್ಕೆ ಏರಿಸುವ ಸಾಧ್ಯತೆಯಿದೆ. ಇದರಲ್ಲಿ 815 ಸ್ಥಾನಗಳು ರಾಜ್ಯಗಳಿಗೆ ಮತ್ತು 35 ಸ್ಥಾನಗಳು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆಯಾಗಲಿವೆ.
2023ರಲ್ಲಿ ಅಂಗೀಕಾರವಾಗಿದ್ದ ‘ನಾರಿ ಶಕ್ತಿ ವಂದನ್ ಅಧಿನಿಯಮ’ವನ್ನು (33% ಮೀಸಲಾತಿ) 2029ರ ಸಾರ್ವತ್ರಿಕ ಚುನಾವಣೆಗಿಂತ ಮುಂಚಿತವಾಗಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳುವ ಪ್ರಸ್ತಾವನೆ ಇದೆ.
ಇಂದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ಮಸೂದೆಯ ಕುರಿತು ಮಾತನಾಡಲಿದ್ದು, ಈ ಐತಿಹಾಸಿಕ ಬದಲಾವಣೆಯ ಮಾರ್ಗಸೂಚಿಯನ್ನು ದೇಶದ ಮುಂದೆ ಇಡಲಿದ್ದಾರೆ.








