ನವದೆಹಲಿ:ಧಾರ್ಮಿಕ ಆಚರಣೆಗಳು ಮತ್ತು ಸಾಮಾಜಿಕ ಸುಧಾರಣೆಗಳ ನಡುವಿನ ಸಮತೋಲನದ ಕುರಿತು ಸುಪ್ರೀಂ ಕೋರ್ಟ್ ಗುರುವಾರ ಅತ್ಯಂತ ಮಹತ್ವದ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. “ಸಾಮಾಜಿಕ ಸುಧಾರಣೆ ಅಥವಾ ಕಲ್ಯಾಣದ ಹೆಸರಿನಲ್ಲಿ ನ್ಯಾಯಾಲಯಗಳು ಧರ್ಮದ ಮೂಲ ಅಸ್ತಿತ್ವವನ್ನೇ ಅಳಿಸಲು (Hollow out) ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಹೇಳಿದೆ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿನ ತಾರತಮ್ಯದ ಕುರಿತಾದ ಅರ್ಜಿಗಳ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಮಾತುಗಳನ್ನು ಹೇಳಿದೆ.
“ಕೋಟಿಗಟ್ಟಲೆ ಜನರ ನಂಬಿಕೆಗಳು ತಪ್ಪು ಎಂದು ಘೋಷಿಸುವುದು ನ್ಯಾಯಾಲಯಕ್ಕೆ ಅತ್ಯಂತ ಕಠಿಣವಾದ ಕೆಲಸ. ಧರ್ಮ ಮತ್ತು ನಂಬಿಕೆಗಳನ್ನು ಪರೀಕ್ಷಿಸಲು ಕೇವಲ ‘ತರ್ಕ’ (Logic) ಸರಿಯಾದ ಮಾನದಂಡವಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಮಾತನಾಡುತ್ತಾ, “ಸಾಮಾಜಿಕ ಸುಧಾರಣೆಯ ನೆಪದಲ್ಲಿ ಧರ್ಮವು ತನ್ನ ಮೂಲ ಗುರುತನ್ನೇ ಕಳೆದುಕೊಳ್ಳುವಂತಾಗಬಾರದು” ಎಂದು ತಿಳಿಸಿದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ಮೂಲಕ ಧಾರ್ಮಿಕ ಸಂಪ್ರದಾಯಗಳನ್ನು ಪ್ರಶ್ನಿಸುವುದಕ್ಕೆ ಒಂದು ಮಿತಿ ಇರಬೇಕು. ಆ ಧರ್ಮದ ಅನುಯಾಯಿ ಅಲ್ಲದ ವ್ಯಕ್ತಿ ಸಲ್ಲಿಸುವ ಅರ್ಜಿಗಳ ಬಗ್ಗೆ ನ್ಯಾಯಾಲಯ ಎಚ್ಚರಿಕೆ ವಹಿಸಬೇಕು ಎಂದು ಪೀಠ ಹೇಳಿದೆ.








