ಮುಂಬೈ:ರಿಲಯನ್ಸ್ ಹೋಮ್ ಫೈನಾನ್ಸ್ (RHFL) ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ಅವರ ಅತ್ಯಂತ ಆಪ್ತ ಸಹಾಯಕರು ಹಾಗೂ ರಿಲಯನ್ಸ್ ಗ್ರೂಪ್‌ನ ಮಾಜಿ ಹಿರಿಯ ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ (PMLA) ಈ ಕ್ರಮ ಕೈಗೊಳ್ಳಲಾಗಿದ್ದು, ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದೆ.
ಅನಿಲ್ ಅಂಬಾನಿ ಅವರ ಬಲಗೈ ಬಂಟ ಎಂದೇ ಕರೆಯಲ್ಪಡುವ ರಿಲಯನ್ಸ್ ಕ್ಯಾಪಿಟಲ್‌ನ ಮಾಜಿ ಉಪಾಧ್ಯಕ್ಷ ಅಮಿತಾಭ್ ಜುಂಜುನ್ವಾಲಾ ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್‌ನ ಮಾಜಿ ನಿರ್ದೇಶಕ ಅಮಿತ್ ಬಾಪ್ನಾ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಮೂಲಕ ಶೆಲ್ ಕಂಪನಿಗಳನ್ನು ಬಳಸಿ ಸುಮಾರು 40,000 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಇವರ ಮೇಲಿದೆ.
ಇತ್ತೀಚೆಗಷ್ಟೇ ಸಿಬಿಐ (CBI) ಎಲ್‌ಐಸಿಗೆ 3,750 ಕೋಟಿ ರೂ. ನಷ್ಟ ಉಂಟುಮಾಡಿದ ಆರೋಪದ ಮೇಲೆ ಅನಿಲ್ ಅಂಬಾನಿ ಮತ್ತು ಆರ್‌ಕಾಮ್ (RCom) ವಿರುದ್ಧ ಹೊಸ ಎಫ್‌ಐಆರ್ ದಾಖಲಿಸಿತ್ತು. ಇದರ ಬೆನ್ನಲ್ಲೇ ಈ ಬಂಧನ ನಡೆದಿದೆ.








