ನವದೆಹಲಿ:ಕಳೆದ ಕೆಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ (BTA) ಅಂತಿಮ ರೂಪ ನೀಡಲು ಕೇಂದ್ರ ಸರ್ಕಾರದ ಉನ್ನತ ಮಟ್ಟದ ನಿಯೋಗವು ಏಪ್ರಿಲ್ 20 ರಿಂದ ಅಮೆರಿಕ ಪ್ರವಾಸ ಕೈಗೊಳ್ಳಲಿದೆ. ಭಾರತದ ಮುಖ್ಯ ಸಂಧಾನಕಾರರಾದ ದರ್ಪನ್ ಜೈನ್ ಅವರ ನೇತೃತ್ವದ ಈ ತಂಡವು ಮೂರು ದಿನಗಳ ಕಾಲ ವಾಷಿಂಗ್ಟನ್‌ನಲ್ಲಿ ಅಮೆರಿಕದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದೆ.
ಫೆಬ್ರವರಿ 7 ರಂದು ಘೋಷಿಸಲಾದ ಮಧ್ಯಂತರ ಒಪ್ಪಂದದ ಚೌಕಟ್ಟನ್ನು ಕಾನೂನುಬದ್ಧವಾಗಿ ಗಟ್ಟಿಗೊಳಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ.
ಫೆಬ್ರವರಿಯಲ್ಲಿ ಅಮೆರಿಕವು ಭಾರತದ ಮೇಲಿನ ಆಮದು ಸುಂಕವನ್ನು 25% ರಿಂದ 18% ಕ್ಕೆ ಇಳಿಸಲು ಒಪ್ಪಿತ್ತು. ಆದರೆ, ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಸರ್ಕಾರದ ಕೆಲವು ಸುಂಕ ನೀತಿಗಳನ್ನು ರದ್ದುಗೊಳಿಸಿದ ನಂತರ, ಈಗ ಬದಲಾದ ಸನ್ನಿವೇಶದಲ್ಲಿ ಭಾರತಕ್ಕೆ ಯಾವ ರೀತಿಯ ಆದ್ಯತೆ ಸಿಗಲಿದೆ ಎಂಬ ಬಗ್ಗೆ ಮರು-ಮಾತುಕತೆ ನಡೆಯಲಿದೆ.
ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಅಮೆರಿಕ ಇತ್ತೀಚೆಗೆ ಆರಂಭಿಸಿರುವ ‘ಸೆಕ್ಷನ್ 301’ ತನಿಖೆಯ (ವ್ಯಾಪಾರ ನೀತಿಗಳ ತನಿಖೆ) ಕುರಿತಾಗಿ ಭಾರತ ತನ್ನ ಆಕ್ಷೇಪಣೆಗಳನ್ನು ಮಂಡಿಸಲಿದೆ.
ವೈದ್ಯಕೀಯ ಉಪಕರಣಗಳು, ಐಟಿ (ICT) ಉತ್ಪನ್ನಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ರಫ್ತು-ಆಮದು ಸುಂಕಗಳನ್ನು ಕಡಿಮೆ ಮಾಡುವ ಬಗ್ಗೆ ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.








