ನವದೆಹಲಿ : ರೈಲು ಪ್ರಯಾಣ ಎಂದರೆ ಎಲ್ಲರಿಗೂ ಇಷ್ಟ, ಆದರೆ ಪ್ರಯಾಣದ ಸಮಯದಲ್ಲಿ ಸಿಗುವ ಆಹಾರದ ಗುಣಮಟ್ಟದ ಬಗ್ಗೆ ಅನೇಕರಿಗೆ ದೂರುಗಳಿರುವುದು ಸಾಮಾನ್ಯ. ರೈಲು ನಿಲ್ದಾಣಗಳಲ್ಲಿ ಸಿಗುವ ತಿಂಡಿ-ತಿನಿಸುಗಳ ಬಗ್ಗೆ ಅಸಮಾಧಾನ ಹೊಂದಿರುವ ಪ್ರಯಾಣಿಕರಿಗೆ ಈಗ ಒಂದು ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ.
ಪ್ರಸಿದ್ಧ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ (Swiggy) ಮತ್ತು ಭಾರತೀಯ ರೈಲ್ವೆಯ ಐಆರ್ಸಿಟಿಸಿ (IRCTC) ಈಗ ಒಂದಾಗಿವೆ. ಈ ಹೊಸ ಒಪ್ಪಂದದ ಪ್ರಕಾರ, ಇನ್ಮುಂದೆ ಪ್ರಯಾಣಿಕರು ರೈಲಿನಲ್ಲಿ ಕುಳಿತಲ್ಲೇ ತಮ್ಮ ಇಷ್ಟದ ಹೋಟೆಲ್ಗಳಿಂದ ಆಹಾರವನ್ನು ಆರ್ಡರ್ ಮಾಡಿ ಸವಿಯಬಹುದಾಗಿದೆ.
ಸ್ವಿಗ್ಗಿ ಮೂಲಕ ವಿವಿಧ ಹೋಟೆಲ್ಗಳಿಂದ ತಮಗಿಷ್ಟವಾದ ಆಹಾರವನ್ನು ಪ್ರಯಾಣಿಕರು ಆಯ್ಕೆ ಮಾಡಬಹುದು. ರೈಲಿನಲ್ಲಿ ಕುಳಿತು ಆರ್ಡರ್ ಮಾಡಿದರೆ, ರೈಲು ಮುಂದಿನ ನಿಲ್ದಾಣ ತಲುಪುವಷ್ಟರಲ್ಲಿ ಆಹಾರವು ಗ್ರಾಹಕರ ಕೈ ಸೇರಲಿದೆ.
ಈ ಸೇವೆಯು ಈಗಾಗಲೇ ದೇಶದ ನೂರಾರು ಪ್ರಮುಖ ರೈಲು ನಿಲ್ದಾಣಗಳಲ್ಲಿ ಲಭ್ಯವಿದ್ದು, ಸ್ಥಳೀಯವಾಗಿ ಪ್ರಸಿದ್ಧವಾಗಿರುವ ಹೋಟೆಲ್ಗಳ ಆಹಾರವನ್ನೂ ಸಹ ಪರಿಚಯಿಸಲಾಗುತ್ತಿದೆ. ಗುಣಮಟ್ಟದ ಆಹಾರಕ್ಕಾಗಿ ರೈಲು ನಿಲ್ದಾಣಗಳಲ್ಲಿ ಇಳಿದು ಹುಡುಕಾಡುವ ಅವಶ್ಯಕತೆಯಿಲ್ಲದೆ, ತೃಪ್ತಿಯಿಂದ ಪ್ರಯಾಣ ಬೆಳೆಸಲು ಈ ಸೌಲಭ್ಯ ಅನುಕೂಲ ಮಾಡಿಕೊಡಲಿದೆ.
ರೈಲು ಪ್ರಯಾಣವನ್ನು ಇನ್ನಷ್ಟು ಆರಾಮದಾಯಕ ಮತ್ತು ಸ್ವಾದಿಷ್ಟವಾಗಿಸಲು ಈ ಕ್ರಮವು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.








