ಮುಂಬೈ: ಐಪಿಎಲ್ 2026ರ ಆವೃತ್ತಿಯಲ್ಲಿ ಸತತ ಸೋಲುಗಳಿಂದ ಕಂಗಾಲಾಗಿರುವ ಮುಂಬೈ ಇಂಡಿಯನ್ಸ್ಗೆ ಈಗ ಮತ್ತೊಂದು ಮರಣಾಂತಿಕ ಪೆಟ್ಟು ಬಿದ್ದಿದೆ. ತಂಡದ ಸ್ಟಾರ್ ಓಪನರ್ ಮತ್ತು ಮಾಜಿ ನಾಯಕ ರೋಹಿತ್ ಶರ್ಮಾ ಅವರು ಗಾಯದ ಸಮಸ್ಯೆಯಿಂದಾಗಿ ಮುಂಬರುವ ಪ್ರಮುಖ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಇದು ನಾಯಕ ಹಾರ್ದಿಕ್ ಪಾಂಡ್ಯ ಅವರ ಯೋಜನೆಗಳಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.
ಆರ್ಸಿಬಿ (RCB) ವಿರುದ್ಧದ ಪಂದ್ಯದ ವೇಳೆ ರೋಹಿತ್ ಶರ್ಮಾ ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ಒಳಗಾಗಿದ್ದರು. ಸ್ಕ್ಯಾನಿಂಗ್ ವರದಿಗಳ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ವಿಶ್ರಾಂತಿ ನೀಡಲು ವೈದ್ಯಕೀಯ ತಂಡ ಸೂಚಿಸಿದೆ.
ಪಂಜಾಬ್ ಕಿಂಗ್ಸ್ (PBKS) ಮತ್ತು ಗುಜರಾತ್ ಟೈಟನ್ಸ್ (GT) ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ ರೋಹಿತ್ ಆಡುವುದಿಲ್ಲ ಎಂದು ವರದಿಯಾಗಿದೆ.
ಈಗಾಗಲೇ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಹಿರಿಯ ಆಟಗಾರ ರೋಹಿತ್ ಅಲಭ್ಯತೆ ಹಾರ್ದಿಕ್ ಪಾಂಡ್ಯ ಅವರನ್ನು ಚಿಂತೆಗೀಡು ಮಾಡಿದೆ. “ರೋಹಿತ್ ಅವರಂತಹ ಅನುಭವಿ ಆಟಗಾರನ ಅನುಪಸ್ಥಿತಿಯನ್ನು ತುಂಬುವುದು ಕಷ್ಟ” ಎಂದು ತಂಡದ ಮೂಲಗಳು ತಿಳಿಸಿವೆ.








