ತೆಹ್ರಾನ್:ಇರಾನ್ನ ಬಂದರುಗಳ ಮೇಲೆ ಅಮೆರಿಕ ಹೇರಿರುವ ನೌಕಾಪಡೆಯ ದಿಗ್ಬಂಧನವು (Naval Blockade) ಜಾಗತಿಕ ಸಮುದ್ರ ಮಾರ್ಗಗಳಲ್ಲಿ ಮಹಾ ಸಂಘರ್ಷಕ್ಕೆ ನಾಂದಿ ಹಾಡಿದೆ. “ಅಮೆರಿಕವು ತನ್ನ ದಿಗ್ಬಂಧನವನ್ನು ಮುಂದುವರಿಸಿ ಇರಾನ್ನ ವಾಣಿಜ್ಯ ಹಡಗುಗಳಿಗೆ ಅಡ್ಡಿಪಡಿಸಿದರೆ, ನಾವು ಕೆಂಪು ಸಮುದ್ರ (Red Sea), ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಸಮುದ್ರದ ಮೂಲಕ ನಡೆಯುವ ವ್ಯಾಪಾರ ಮಾರ್ಗಗಳನ್ನೇ ಬಂದ್ ಮಾಡುತ್ತೇವೆ” ಎಂದು ಇರಾನ್ ಸೇನೆಯು ಬುಧವಾರ ಕಠಿಣ ಎಚ್ಚರಿಕೆ ನೀಡಿದೆ.
ಇರಾನ್ನ ಉನ್ನತ ಮಿಲಿಟರಿ ಕಮಾಂಡ್ ಕೇಂದ್ರದ ಮುಖ್ಯಸ್ಥ ಅಲಿ ಅಬ್ದುಲ್ಲಾಹಿ ಅವರು ಸರ್ಕಾರಿ ದೂರದರ್ಶನದ ಮೂಲಕ ಈ ಹೇಳಿಕೆ ನೀಡಿದ್ದಾರೆ. ಅಮೆರಿಕದ ಈ ದಿಗ್ಬಂಧನವು ಪ್ರಸ್ತುತ ಇರುವ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುವ ಮುನ್ಸೂಚನೆಯಾಗಿದೆ ಎಂದು ಇರಾನ್ ಬಣ್ಣಿಸಿದೆ.
ಇರಾನ್ ಈ ಪ್ರಮುಖ ಸಮುದ್ರ ಮಾರ್ಗಗಳನ್ನು ಸ್ಥಗಿತಗೊಳಿಸಿದರೆ, ಇಡೀ ವಿಶ್ವದ ತೈಲ ಪೂರೈಕೆ ಮತ್ತು ಸರಕು ಸಾಗಣೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ.”ನಮ್ಮ ದೇಶದ ರಫ್ತು ಮತ್ತು ಆಮದುಗಳಿಗೆ ಅಡ್ಡಿಪಡಿಸಿದರೆ, ಈ ಸಮುದ್ರ ಮಾರ್ಗಗಳಲ್ಲಿ ಯಾವುದೇ ದೇಶದ ಹಡಗುಗಳ ಸಂಚಾರಕ್ಕೆ ನಾವು ಅವಕಾಶ ನೀಡುವುದಿಲ್ಲ” ಎಂದು ಸೇನಾ ಮುಖ್ಯಸ್ಥರು ಗುಡುಗಿದ್ದಾರೆ.








