ನವದೆಹಲಿ:ಮಹಿಳಾ ಮೀಸಲಾತಿ ಮಸೂದೆಯ ಕುರಿತು ಕೇಂದ್ರ ಸರ್ಕಾರದ ನಡೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟುವಾಗಿ ಟೀಕಿಸಿದ್ದಾರೆ. “ನಾವು ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿಲ್ಲ, ಆದರೆ ಸರ್ಕಾರ ಈ ಮಸೂದೆಯನ್ನು ಮಂಡಿಸುತ್ತಿರುವ ರೀತಿ ಮತ್ತು ಅದರಲ್ಲಿನ ಷರತ್ತುಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ” ಎಂದು ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.
ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ:”ಮಹಿಳೆಯರಿಗೆ ಮೀಸಲಾತಿ ನೀಡುವ ಬಗ್ಗೆ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಸರ್ಕಾರ ಇದನ್ನು 2029 ಅಥವಾ ಅದಕ್ಕಿಂತ ನಂತರಕ್ಕೆ ಮುಂದೂಡಲು ಕ್ಷೇತ್ರ ಮರುವಿಂಗಡಣೆಯಂತಹ ಷರತ್ತುಗಳನ್ನು ಹೇರುತ್ತಿದೆ. ಇದು ಕೇವಲ ರಾಜಕೀಯ ಗಿಮಿಕ್,” ಎಂದು ಖರ್ಗೆ ಕಿಡಿಕಾರಿದ್ದಾರೆ.
ಮೀಸಲಾತಿಯೊಳಗೆ ಇತರ ಹಿಂದುಳಿದ ವರ್ಗಗಳ (OBC) ಮಹಿಳೆಯರಿಗೆ ಪ್ರತ್ಯೇಕ ಪಾಲು ನೀಡಬೇಕು ಎಂಬ ಬೇಡಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ. “ಒಬಿಸಿ ಮಹಿಳೆಯರನ್ನು ಹೊರಗಿಟ್ಟು ಮಸೂದೆ ತರುವುದು ಅವರಿಗೆ ಮಾಡುವ ಅನ್ಯಾಯ,” ಎಂದು ಅವರು ಪ್ರತಿಪಾದಿಸಿದರು.
ಸರ್ಕಾರದ ಮಸೂದೆ ಮಂಡನೆಯ ಧೋರಣೆಯನ್ನು ಟೀಕಿಸಿದ ಅವರು, ವಿರೋಧ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ಮಸೂದೆ ತರುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಎಂದಿದ್ದಾರೆ.








