ನಾಸಿಕ್: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಾಸಿಕ್ ಘಟಕದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರ ಯತ್ನ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಬಂಧಿತ ಮಹಿಳಾ ಎಚ್‌ಆರ್ (HR) ಮ್ಯಾನೇಜರ್ ಅವರ ಪೊಲೀಸ್ ಕಸ್ಟಡಿಯನ್ನು ನಾಸಿಕ್ ನ್ಯಾಯಾಲಯವು ಏಪ್ರಿಲ್ 15 ರವರೆಗೆ ವಿಸ್ತರಿಸಿದೆ.
ಈ ಪ್ರಕರಣದಲ್ಲಿ ಕಂಪನಿಯ ಆಂತರಿಕ ದೂರು ಸಮಿತಿಯ (POSH) ಭಾಗವಾಗಿದ್ದರೂ ಸಹ, ಸಂತ್ರಸ್ತ ಮಹಿಳೆಯರು ನೀಡಿದ ದೂರುಗಳ ಮೇಲೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಎಚ್‌ಆರ್ ಮ್ಯಾನೇಜರ್ ಅಶ್ವಿನಿ ಚೈನಾನಿ ಅವರನ್ನು ಬಂಧಿಸಲಾಗಿದೆ.
ಸುಮಾರು ಎಂಟು ಮಂದಿ ಮಹಿಳಾ ಉದ್ಯೋಗಿಗಳು ತಮ್ಮ ಹಿರಿಯ ಸಹೋದ್ಯೋಗಿಗಳಿಂದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಮತ್ತು ಬಲವಂತದ ಧಾರ್ಮಿಕ ಮತಾಂತರದ ಪ್ರಯತ್ನ ನಡೆದಿದೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಒಟ್ಟು 9 ಎಫ್‌ಐಆರ್ (FIR) ದಾಖಲಾಗಿವೆ.
ಪ್ರಕರಣದ ಗಂಭೀರತೆ ಪರಿಗಣಿಸಿ ಮಹಾರಾಷ್ಟ್ರ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಎಸ್‌ಐಟಿ ಈಗಾಗಲೇ ಆರೋಪಿಗಳ ಡಿಜಿಟಲ್ ಸಾಧನಗಳಿಂದ ಸುಮಾರು 78 ಇಮೇಲ್‌ಗಳು ಮತ್ತು ಚಾಟ್‌ಗಳನ್ನು ವಶಪಡಿಸಿಕೊಂಡಿದ್ದು, ತಪಾಸಣೆ ನಡೆಸುತ್ತಿದೆ.
ಕಂಪನಿಯ ಕ್ರಮ: ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಈಗಾಗಲೇ ಪ್ರಕರಣದಲ್ಲಿ ಹೆಸರಿಸಲಾದ ಎಂಟು ಉದ್ಯೋಗಿಗಳನ್ನು ಕಂಪನಿ ಅಮಾನತುಗೊಳಿಸಿದೆ.
ಸಂತ್ರಸ್ತರಿಗೆ ಗೋಮಾಂಸ ಸೇವಿಸುವಂತೆ ಮತ್ತು ನಮಾಜ್ ಮಾಡುವಂತೆ ಬಲವಂತಪಡಿಸಲಾಗುತ್ತಿತ್ತು ಎಂಬ ಆಘಾತಕಾರಿ ಅಂಶಗಳು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿವೆ.








