ಬೆಂಗಳೂರು: ರಾಜಧಾನಿಯ ಸಂಗೀತ ಪ್ರಿಯರಿಗಾಗಿ ‘ಪರಮ್ ಫೌಂಡೇಶನ್’ ವತಿಯಿಂದ ‘ತತ್ವ’ ಎಂಬ ವಿಶಿಷ್ಟ ಭಕ್ತಿ ಫ್ಯೂಷನ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದ ಪ್ರಸಿದ್ಧ ಚೌಡಯ್ಯ ಸ್ಮಾರಕ ಭವನದಲ್ಲಿ ಏಪ್ರಿಲ್ 17ರಂದು ಸಂಜೆ 6.15ಕ್ಕೆ ಈ ಸಂಗೀತ ಸಂಜೆ ಆಯೋಜಿಸಲಾಗಿದೆ.
‘ನಾದದ ಲಯದಿಂದ ಆನಂದದತ್ತ ಪಯಣ’ (A Journey from Breath to Bliss) ಎಂಬ ಪರಿಕಲ್ಪನೆಯಡಿ ಮೂಡಿಬರುತ್ತಿರುವ ಈ ಗಾಯನ ಸುಧೆಯನ್ನು ಅರುಂಧತಿ ವಸಿಷ್ಠ ಮತ್ತು ವರುಣ್ ಪ್ರದೀಪ್ ತಂಡವು ನಡೆಸಿಕೊಡಲಿದೆ. ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಸಮಕಾಲೀನ ಶೈಲಿಯಲ್ಲಿ ಪ್ರಸ್ತುತಪಡಿಸುವುದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿದೆ. ವೇದಘೋಷಗಳು, ಶಾಸ್ತ್ರೀಯ ಪ್ರಭಾವ ಹಾಗೂ ಜನಪದ ಧಾಟಿಯನ್ನು ಆಧುನಿಕ ಸಂಗೀತ ಉಪಕರಣಗಳೊಂದಿಗೆ ಇಲ್ಲಿ ಬೆಸೆಯಲಾಗಿದೆ.
ಉಮೇಶ್ ವಾರ್ಭುವನ್, ಪ್ರದ್ಯುಮ್ನ ಸೊರಬ ಸೇರಿದಂತೆ 15ಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರು ಹಾಗೂ ವಾದ್ಯವೃಂದದ ಜೊತೆಗೆ 8 ಮಂದಿಯ ಗಾಯಕ ತಂಡವು ಈ ಸಂಜೆಯ ಕಾರ್ಯಕ್ರಮಕ್ಕೆ ಕಳೆ ಕಟ್ಟಲಿದೆ. ವಿಶೇಷವಾಗಿ ಖ್ಯಾತ ಕಲಾವಿದರಾದ ಪ್ರವೀಣ್ ಡಿ. ರಾವ್ ಹಾಗೂ ಮಂಜುನಾಥ್ ಸತ್ಯಶೀಲ್ ಭಾಗವಹಿಸಲಿದ್ದಾರೆ. ಮನಸ್ಸಿಗೆ ನೆಮ್ಮದಿ ಹಾಗೂ ಹೊಸ ಚೈತನ್ಯ ತುಂಬುವ ಈ ಕಲಾ ಸಂಗಮವು, ಪ್ರೇಕ್ಷಕರ ಕಣ್ಮನ ಸೆಳೆಯುವ ಜೊತೆಗೆ ಒಂದು ವಿಶಿಷ್ಟ ಆಧ್ಯಾತ್ಮಿಕ ಅನುಭವವನ್ನು ಉಣಬಡಿಸಲಿದೆ.
ಏನಿದು ಪರಂಪರಾ?
“ಪರಮ್ ಕಲ್ಚರ್” ಪ್ರಸ್ತುತಪಡಿಸುವ ‘ಪರಂಪರಾ’ ಸರಣಿ ಬಹು ಜನಪ್ರಿಯವಾಗಿರುವಂತಹ ಕಾರ್ಯಕ್ರಮವಾಗಿದೆ. ಈಗಾಗಲೇ ನಡೆದಿರುವ ಪ್ರತಿಯೊಂದರ ವಿಷಯವಸ್ತುವೂ ವಿಭಿನ್ನವಾಗಿದ್ದು, ಪ್ರೇಕ್ಷಕರಿಂದ ಹಾಗೂ ಕಲಾವಿದರಿಂದ ಪ್ರಶಂಸೆಗೊಳಪಟ್ಟಿದೆ. ಕರ್ನಾಟಕ ಹಾಗೂ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಸೇರಿ ಭರತನಾಟ್ಯ, ಚಿತ್ರಕಲಾ ಪ್ರದರ್ಶನ ಇವೆಲ್ಲ ಕಾರ್ಯಕ್ರಮಗಳ ಜೊತೆಗೆ, ‘ವೀರ ಸಂನ್ಯಾಸಿಯ ಆತ್ಮಗೀತೆ’ ಎಂಬ ಅದ್ಭುತವಾದ ಮಲ್ಟಿಮೀಡಿಯಾ ಪ್ರೊಡಕ್ಷನ್ ಹಾಗೂ ದಾಸವಾಣಿ – ಸಂತವಾಣಿ ಎಂಬ ಸಂಗೀತ ಕಾರ್ಯಾಗಾರವನ್ನೂ ಕೂಡ ಪರಂಪರಾ ಸರಣಿಯಲ್ಲಿ ಪ್ರದರ್ಶಿಸಲ್ಪಟ್ಟಿದೆ.








