ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026ರ ಕ್ರಿಕೆಟ್ ಪಂದ್ಯಗಳ ಹಿನ್ನೆಲೆಯಲ್ಲಿ, ಕ್ರಿಕೆಟ್ ಪ್ರೇಮಿಗಳ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಿಸಿದೆ.
ಏಪ್ರಿಲ್ 15 ಮತ್ತು ಏಪ್ರಿಲ್ 24 ರಂದು ನಡೆಯಲಿರುವ ಪಂದ್ಯಗಳ ದಿನದಂದು ಮೆಟ್ರೋ ರೈಲುಗಳು ಮಧ್ಯರಾತ್ರಿ ದಾಟಿ ಅಂದರೆ ಮರುದಿನ ಮುಂಜಾನೆ 2:00 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಪ್ರಯಾಣಿಕರು ಸುರಕ್ಷಿತವಾಗಿ ಮನೆ ತಲುಪಲು ಅನುಕೂಲವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಿವಿಧ ಮಾರ್ಗಗಳ ಕೊನೆಯ ರೈಲಿನ ವೇಳಾಪಟ್ಟಿ ಹೀಗಿದೆ:
-
ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್): ಇಲ್ಲಿಂದ ನಾಲ್ಕೂ ದಿಕ್ಕುಗಳಿಗೆ ಅಂದರೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಕಡೆಗೆ ತೆರಳುವ ಕೊನೆಯ ರೈಲುಗಳು ಮಧ್ಯರಾತ್ರಿ 1:30ಕ್ಕೆ ಹೊರಡಲಿವೆ.
-
ಪರ್ಪಲ್ ಲೈನ್ (ನೇರಳೆ ಮಾರ್ಗ): ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ರಾತ್ರಿ 12:30ಕ್ಕೆ ಮತ್ತು ಚಲ್ಲಘಟ್ಟದಿಂದ ರಾತ್ರಿ 12:45ಕ್ಕೆ ಕೊನೆಯ ರೈಲು ಹೊರಡಲಿದೆ.
-
ಗ್ರೀನ್ ಲೈನ್ (ಹಸಿರು ಮಾರ್ಗ): ರೇಷ್ಮೆ ಸಂಸ್ಥೆ ಮತ್ತು ಮಾದಾವರ (BIEC) ನಿಲ್ದಾಣಗಳಿಂದ ರಾತ್ರಿ 12:45ಕ್ಕೆ ಕೊನೆಯ ರೈಲುಗಳು ಸಂಚರಿಸಲಿವೆ.
-
ಎಲ್ಲೋ ಲೈನ್ (ಹಳದಿ ಮಾರ್ಗ): ಬೊಮ್ಮಸಂದ್ರದಿಂದ ರಾತ್ರಿ 12:30ಕ್ಕೆ ಹಾಗೂ ಆರ್.ವಿ ರಸ್ತೆಯಿಂದ ರಾತ್ರಿ 2:00 ಗಂಟೆಗೆ ಕೊನೆಯ ರೈಲು ಲಭ್ಯವಿರಲಿದೆ.
ಗಮನಿಸಿ: ಏಪ್ರಿಲ್ 18 ರಂದು ನಡೆಯಲಿರುವ ಪಂದ್ಯದ ದಿನದಂದು ಮೆಟ್ರೋ ಸೇವೆಯಲ್ಲಿ ಯಾವುದೇ ವಿಸ್ತರಣೆ ಇರುವುದಿಲ್ಲ. ಅಂದು ಮೆಟ್ರೋ ರೈಲುಗಳು ಎಂದಿನಂತೆ ನಿಗದಿತ ವೇಳಾಪಟ್ಟಿಯ ಪ್ರಕಾರವೇ ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ಕ್ರಿಕೆಟ್ ಪಂದ್ಯ ಮುಗಿದ ನಂತರ ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಟಿಕೆಟ್ ಕೌಂಟರ್‌ಗಳಲ್ಲಿ ಗೊಂದಲ ತಪ್ಪಿಸಲು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಅಥವಾ ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಬಳಸಲು ಸೂಚಿಸಲಾಗಿದೆ.








