ಶಿವಮೊಗ್ಗ: ಖಾಲಿ ಜಾಗದಲ್ಲಿ ಮೊಬೈಲ್ ಟವರ್ ಅಳವಡಿಸಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.
ಫೆಬ್ರವರಿ 5ರಂದು ದೂರುದಾರರ ತಂದೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ನಿಮ್ಮ ಖಾಲಿ ಜಾಗದಲ್ಲಿ ಜಿಯೋ ಟವರ್ ಅಳವಡಿಸುತ್ತೇವೆ, ಇದಕ್ಕೆ ಪ್ರತಿಯಾಗಿ 60 ಲಕ್ಷ ರೂ. ಅಡ್ವಾನ್ಸ್, ತಿಂಗಳಿಗೆ 50,000 ರೂ. ಬಾಡಿಗೆ ಹಾಗೂ ಮಗನಿಗೆ ಕೆಲಸ ನೀಡುವುದಾಗಿ ಆಮಿಷ ಒಡ್ಡಿದ್ದಾನೆ.
ಇದನ್ನು ನಂಬಿದ ಸಂತ್ರಸ್ತರಿಗೆ ಟವರ್ ಅಳವಡಿಕೆಯ ಪ್ರಕ್ರಿಯೆ ಆರಂಭಿಸಲು ಪ್ರೊಸೆಸಿಂಗ್ ಫೀ, ಟೆಲಿಕಾಂ ಇಲಾಖೆ ಲೈಸೆನ್ಸ್ ಶುಲ್ಕ ಮತ್ತು ಜಿಎಸ್ಟಿ ಹೆಸರಿನಲ್ಲಿ ಹಣ ಪಾವತಿಸುವಂತೆ ವಂಚಕರು ಸೂಚಿಸಿದ್ದಾರೆ. ಹಂತ ಹಂತವಾಗಿ ಸಂತ್ರಸ್ತರು ವಿವಿಧ ಬ್ಯಾಂಕ್ ಖಾತೆ ಹಾಗೂ ಕ್ಯೂಆರ್ ಕೋಡ್ಗಳ ಮೂಲಕ ಒಟ್ಟು 5,15,900 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ.
ಇಷ್ಟೆಲ್ಲಾ ಹಣ ಪಡೆದ ನಂತರವೂ ವಂಚಕರು ಅಗ್ನಿಶಾಮಕ ಇಲಾಖೆಯ ಅನುಮತಿಗಾಗಿ ಮತ್ತೆ 1 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ಸಂತ್ರಸ್ತರು ಸ್ನೇಹಿತರ ಬಳಿ ಚರ್ಚಿಸಿದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ದೃಢಪಟ್ಟಿದೆ.
ಗಮನಿಸಿ: ಇಂತಹ ಅಪರಿಚಿತ ಕರೆಗಳು ಅಥವಾ ಆಮಿಷಗಳಿಗೆ ಸಾರ್ವಜನಿಕರು ಬಲಿಯಾಗಬಾರದು. ಯಾವುದೇ ಅಧಿಕೃತ ಕಂಪನಿಗಳು ಟವರ್ ಅಳವಡಿಕೆಗಾಗಿ ಹಣವನ್ನು ಮುಂಗಡವಾಗಿ ಕೇಳುವುದಿಲ್ಲ. ಸೈಬರ್ ವಂಚನೆಗೊಳಗಾದಲ್ಲಿ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಿ.








