ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಹೈ-ವೋಲ್ಟೇಜ್ ಪಂದ್ಯದ ನಂತರ, ಉಭಯ ತಂಡಗಳ ಆಟಗಾರರಿಗೆ ಐಪಿಎಲ್ ಆಡಳಿತ ಮಂಡಳಿ ಬಿಸಿ ಮುಟ್ಟಿಸಿದೆ. ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಆರ್‌ಸಿಬಿ ಬ್ಯಾಟರ್ ಟಿಮ್ ಡೇವಿಡ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ದಂಡಕ್ಕೆ ಗುರಿಯಾಗಿದ್ದಾರೆ.
ನಿಧಾನಗತಿಯ ಓವರ್ ರೇಟ್ (Slow Over-rate) ಕಾಯ್ದುಕೊಂಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ಸೀಸನ್‌ನಲ್ಲಿ ಮುಂಬೈ ತಂಡ ಮಾಡಿದ ಮೊದಲ ತಪ್ಪು ಇದಾಗಿರುವುದರಿಂದ ಕನಿಷ್ಠ ದಂಡದೊಂದಿಗೆ ಹಾರ್ದಿಕ್ ಪಾರಾಗಿದ್ದಾರೆ.
ಅಂಪಾಯರ್ ನಿರ್ದೇಶನಗಳನ್ನು ಪಾಲಿಸದ ಕಾರಣ ಆರ್‌ಸಿಬಿಯ ಟಿಮ್ ಡೇವಿಡ್ ಅವರ ಪಂದ್ಯದ ಸಂಭಾವನೆಯಲ್ಲಿ 25 ಪ್ರತಿಶತ ಕಡಿತಗೊಳಿಸಲಾಗಿದೆ. ಜೊತೆಗೆ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.
ಆರ್‌ಸಿಬಿ ಬ್ಯಾಟಿಂಗ್ ಮಾಡುತ್ತಿದ್ದಾಗ 18ನೇ ಮತ್ತು 20ನೇ ಓವರ್‌ಗಳಲ್ಲಿ ಚೆಂಡನ್ನು ಬದಲಾಯಿಸಲಾಗಿತ್ತು. ಈ ವೇಳೆ ಅಂಪಾಯರ್ ಚೆಂಡನ್ನು ಹಿಂತಿರುಗಿಸುವಂತೆ ಪದೇ ಪದೇ ಕೇಳಿದರೂ, ಟಿಮ್ ಡೇವಿಡ್ ಅದನ್ನು ನೀಡದೆ ಆಟವಾಡುತ್ತಾ ವಿಳಂಬ ಮಾಡಿದ್ದರು. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.4 ರ ಅಡಿಯಲ್ಲಿ ‘ಅಂಪಾಯರ್ ಸೂಚನೆಯನ್ನು ಧಿಕ್ಕರಿಸುವುದು’ ಎಂದು ಪರಿಗಣಿಸಲಾಗಿದೆ.








