ವಾಷಿಂಗ್ಟನ್: ಇರಾನ್ ಮೇಲೆ ಅಮೆರಿಕ ವಿಧಿಸಿರುವ ಕಠಿಣ ನೌಕಾ ದಿಗ್ಬಂಧನವು ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ದಿಗ್ಬಂಧನದಿಂದ ಕಂಗೆಟ್ಟಿರುವ ಇರಾನ್ ಸರ್ಕಾರವು, ಸಂಧಾನ ಮತ್ತು ಹೊಸ ಒಪ್ಪಂದಕ್ಕಾಗಿ ಅಮೆರಿಕವನ್ನು ಸಂಪರ್ಕಿಸಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಇರಾನ್ ಈಗ ತೀವ್ರ ಸಂಕಷ್ಟದಲ್ಲಿದೆ. ಅವರು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಹಳ ಹಂಬಲಿಸುತ್ತಿದ್ದಾರೆ (They’d like to make a deal very badly). ಈ ನಿಟ್ಟಿನಲ್ಲಿ ಅವರು ನಮ್ಮನ್ನು ಸಂಪರ್ಕಿಸಿದ್ದಾರೆ,” ಎಂದು ತಿಳಿಸಿದ್ದಾರೆ.
ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕದ 15 ಯುದ್ಧನೌಕೆಗಳು ಬೀಡುಬಿಟ್ಟಿರುವ ಬೆನ್ನಲ್ಲೇ ಇರಾನ್ನ ಆರ್ಥಿಕತೆ ಮತ್ತು ತೈಲ ರಫ್ತಿಗೆ ದೊಡ್ಡ ಹೊಡೆತ ಬಿದ್ದಿದೆ. ಇದು ಇರಾನ್ ಅನ್ನು ಮಾತುಕತೆಯ ಮೇಜಿಗೆ ಬರುವಂತೆ ಮಾಡಿದೆ ಎಂಬುದು ಅಮೆರಿಕದ ವಾದ.
ಯಾವುದೇ ಹೊಸ ಒಪ್ಪಂದವಾಗಬೇಕಿದ್ದರೂ ಅದು ಅಮೆರಿಕದ ಕಠಿಣ ನಿಬಂಧನೆಗಳಿಗೆ ಒಳಪಟ್ಟಿರಬೇಕು ಮತ್ತು ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬುದು ಟ್ರಂಪ್ ಅವರ ಪಟ್ಟು.
ಒಂದೆಡೆ ಟ್ರಂಪ್ ಮಾತುಕತೆಯ ಬಗ್ಗೆ ಹೇಳಿಕೆ ನೀಡುತ್ತಿದ್ದರೆ, ಮತ್ತೊಂದೆಡೆ ಇರಾನ್ ಅಧಿಕೃತವಾಗಿ ಇದನ್ನು ಒಪ್ಪಿಕೊಂಡಿಲ್ಲ. “ನಾವು ಯಾವುದೇ ಬೆದರಿಕೆಗೆ ಮಣಿಯುವುದಿಲ್ಲ” ಎಂದು ಇರಾನ್ ನಾಯಕರು ಪದೇ ಪದೇ ಹೇಳುತ್ತಿದ್ದಾರೆ. ಆದರೆ, ಮೂಲಗಳ ಪ್ರಕಾರ ತೆರೆಮರೆಯಲ್ಲಿ ಅಂತರಾಷ್ಟ್ರೀಯ ಮಧ್ಯಸ್ಥಿಕೆದಾರರ ಮೂಲಕ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ.








