ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ತಾತ್ಕಾಲಿಕ ಸಮರ ವಿರಾಮದ ಅವಧಿ ಮುಕ್ತಾಯಗೊಳ್ಳಲು ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ, ಸಂಘರ್ಷವನ್ನು ಶಾಶ್ವತವಾಗಿ ಕೊನೆಗಾಣಿಸುವ ನಿಟ್ಟಿನಲ್ಲಿ ಎರಡನೇ ಸುತ್ತಿನ ನೇರ ಮುಖಾಮುಖಿ ಮಾತುಕತೆ ನಡೆಸಲು ಅಮೆರಿಕ ಗಂಭೀರವಾಗಿ ಆಲೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಕಳೆದ ಏಪ್ರಿಲ್ 7 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವೆ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ 14 ದಿನಗಳ ಕಾಲ ಯುದ್ಧ ಸ್ಥಗಿತಗೊಳಿಸುವ ಒಪ್ಪಂದವಾಗಿತ್ತು. ಈ ಗಡುವು ಮುಂದಿನ ವಾರ ಅಂತ್ಯಗೊಳ್ಳಲಿದ್ದು, ಅದಕ್ಕೂ ಮೊದಲೇ ಒಮ್ಮತಕ್ಕೆ ಬರುವ ಅವಶ್ಯಕತೆಯಿದೆ.
ಮೊದಲ ಸುತ್ತಿನ ಮಾತುಕತೆಗಳು ಇಸ್ಲಾಮಾಬಾದ್ನಲ್ಲಿ ನಡೆದಿದ್ದು, ಎರಡನೇ ಸುತ್ತಿಗೂ ಅದೇ ಸ್ಥಳವನ್ನು ಅಥವಾ ಒಮಾನ್ನ ಮಸ್ಕತ್ ಅನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.ಟರ್ಕಿ, ಈಜಿಪ್ಟ್ ಮತ್ತು ಪಾಕಿಸ್ತಾನ ರಾಷ್ಟ್ರಗಳು ಉಭಯ ದೇಶಗಳ ನಡುವೆ ಸಂಧಾನ ನಡೆಸಲು ತೀವ್ರ ಪ್ರಯತ್ನ ನಡೆಸುತ್ತಿವೆ.







