ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026-27ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಕ್ರಿಯಾಯೋಜನೆಯನ್ನು ಬಿಡುಗಡೆ ಮಾಡಿದೆ. ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅನ್ವಯವಾಗುವಂತೆ ಏಕರೂಪದ ಶೈಕ್ಷಣಿಕ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ಪ್ರಮುಖ ದಿನಾಂಕಗಳು:
-
ಶಾಲೆಗಳ ಪುನರಾರಂಭ: ಮೇ 29, 2026 ರಿಂದ ಶಿಕ್ಷಕರು ಹಾಜರಾಗಬೇಕು. ಮೇ 30ರಿಂದ ದಾಖಲಾತಿ ಅಂದೋಲನ ಹಾಗೂ ಜೂನ್ 1ರಿಂದ ಪೂರ್ಣ ಪ್ರಮಾಣದ ತರಗತಿಗಳು ಆರಂಭವಾಗಲಿವೆ.
-
ದಸರಾ ರಜೆ: ಅಕ್ಟೋಬರ್ 03, 2026 ರಿಂದ ಅಕ್ಟೋಬರ್ 21, 2026 ರವರೆಗೆ.
-
ಬೇಸಿಗೆ ರಜೆ (2027): ಏಪ್ರಿಲ್ 11, 2027 ರಿಂದ ಮೇ 28, 2027 ರವರೆಗೆ.
ಶೈಕ್ಷಣಿಕ ಅವಧಿಗಳ ವಿವರ:
-
ಮೊದಲನೇ ಅವಧಿ: 29-05-2026 ರಿಂದ 02-10-2026 ರವರೆಗೆ.
-
ಎರಡನೇ ಅವಧಿ: 22-10-2026 ರಿಂದ 10-04-2027 ರವರೆಗೆ.
ಕೆಲಸದ ದಿನಗಳ ಲೆಕ್ಕಾಚಾರ:
ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು 245 ಶಾಲಾ ಕೆಲಸದ ದಿನಗಳು ಲಭ್ಯವಿವೆ. ಇವುಗಳಲ್ಲಿ:
-
ಬೋಧನಾ-ಕಲಿಕಾ ಪ್ರಕ್ರಿಯೆಗೆ: 181 ದಿನಗಳು.
-
ಪರೀಕ್ಷೆ ಮತ್ತು ಮೌಲ್ಯಾಂಕನಕ್ಕಾಗಿ: 26 ದಿನಗಳು.
-
ಪಠ್ಯೇತರ ಚಟುವಟಿಕೆಗಳು ಹಾಗೂ ಸ್ಪರ್ಧೆಗಳಿಗಾಗಿ: 24 ದಿನಗಳು.
-
ಫಲಿತಾಂಶ ವಿಶ್ಲೇಷಣೆಗಾಗಿ: 10 ದಿನಗಳು.
-
ಶಾಲಾ ಸ್ಥಳೀಯ ರಜೆಗಳು: 04 ದಿನಗಳು.
ಇಲಾಖೆಯ ಪ್ರಮುಖ ಸೂಚನೆಗಳು:
-
ದಾಖಲಾತಿ ಅಂದೋಲನ: 6 ರಿಂದ 18 ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರಲು ನವೆಂಬರ್ 2025 ರಿಂದ ಜೂನ್ 2026 ರವರೆಗೆ “ದಾಖಲಾತಿ ಜಾಗೃತಿ ಅಭಿಯಾನ” ನಡೆಸಲು ಸೂಚಿಸಲಾಗಿದೆ.
-
ಸಮವಸ್ತ್ರ ಮತ್ತು ಪಠ್ಯಪುಸ್ತಕ: ಜೂನ್ ಮೊದಲ ವಾರದಲ್ಲೇ 1 ರಿಂದ 10ನೇ ತರಗತಿಯ ಮಕ್ಕಳಿಗೆ ಎರಡು ಜೊತೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳ ವಿತರಣೆಯನ್ನು ಪೂರ್ಣಗೊಳಿಸಲು ಇಲಾಖೆ ಆದೇಶಿಸಿದೆ.
-
ರಜೆ ಸರಿದೂಗಿಸುವಿಕೆ: ಅನಿರೀಕ್ಷಿತ ಕಾರಣಗಳಿಂದಾಗಿ ಶಾಲೆಗೆ ರಜೆ ಘೋಷಿಸಿದರೆ, ಆ ಅವಧಿಯನ್ನು ಮುಂದಿನ ರಜೆ ದಿನಗಳಲ್ಲಿ ಪೂರ್ಣ ದಿನದ ಶಾಲೆಗಳನ್ನು ನಡೆಸುವ ಮೂಲಕ ಸರಿದೂಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-
ಕ್ರಿಸ್ಮಸ್ ರಜೆ: ಜಿಲ್ಲಾ ಉಪನಿರ್ದೇಶಕರು ಅಕ್ಟೋಬರ್ ಮಧ್ಯಂತರ ರಜೆಯನ್ನು ಕಡಿತಗೊಳಿಸಿ ಡಿಸೆಂಬರ್ನಲ್ಲಿ ಕ್ರಿಸ್ಮಸ್ ರಜೆ ನೀಡಲು ನಿರ್ಧರಿಸುವ ಅಧಿಕಾರ ಹೊಂದಿದ್ದಾರೆ.
ಈ ಶೈಕ್ಷಣಿಕ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಯುಕ್ತರು ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.









