ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿರುವ ಪಂಚಮಸಾಲಿ ಗುರುಪೀಠಕ್ಕೆ ಕೋಟ್ಯಾಂತರ ರೂಪಾಯಿ ದೇಣಿಗೆ ಬರುತ್ತಿದ್ದು, ಹಾಗಾಗಿ ಪಂಚಮಸಾಲಿ ಗುರುಪೀಠದಲ್ಲಿ ಲೆಕ್ಕ ಕೊಡಿ ಅಭಿಯಾನ ಶುರುವಾಗಿದೆ. ತಹಸೀಲ್ದಾರ್ ಮಠದ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ದಾವಣಗೆರೆಯ ಹರಿಹರದಲ್ಲಿರುವ ಪಂಚಮಸಾಲಿ ಗುರುಪೀಠದಲ್ಲಿ ನಿಷೇಧಜ್ಞೆ ಜಾರಿ ಮಾಡಲಾಗಿದೆ.
ಮಠದ ಗೇಟ್ ಬಳಿಗೆ ಪೊಲೀಸರು ಭಕ್ತರನ್ನು ತಡೆದಿದ್ದಾರೆ. ಈ ಹಿನ್ನೆಲೆ ಸ್ಥಳದಲ್ಲಿ ಬಿಗಿವಿನ ವಾತಾವರಣ ನಿರ್ಮಾಣವಾಗಿದೆ. ಭಕ್ತರು ಗೇಟ್ ಬಳಿ ಹೈಡ್ರಾಮಾ ಸೃಷ್ಟಿ ಮಾಡಿದ್ದು, ಮಠದ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಮಠದ ಒಳಗೆ ವಚನಾನಂದ ಸ್ವಾಮೀಜಿ ಇದ್ದಾರೆ. ಪಂಚಮಸಾಲಿ ಮಠದ ಟ್ರಸ್ಟ್ ಮತ್ತು ಮಠದ ಭಕ್ತರಿಂದ ಇಂದು ಪ್ರತ್ಯೇಕ ಸಭೆ ನಡೆಸಲಾಗಿದೆ. 15 ಜನ ಟ್ರಸ್ಟಿಗಳು 5 ಜನ ಪದನಿಮಿತ್ಯ ಸದಸ್ಯರು ಹಾಗೂ ಮೂವರು ಆಹ್ವಾನಿತರು ಒಳಗೊಂಡ ಸಭೆ ನಡೆಯುತ್ತಿದ್ದು,
ಐವರು ಕಚೇರಿ ಸಹಾಯಕರು ಸೇರಿ 28 ಜನರಿಗೆ ಮಾತ್ರ ಮಠದಲ್ಲಿ ಪ್ರವೇಶ ನೀಡಲಾಗಿದೆ. ಜಿಲ್ಲಾಧಿಕಾರಿ ಗೆ ಟ್ರಸ್ಟ್ ಅಧ್ಯಕ್ಷ ಬಿಸಿ ಮಾಪತಿ ಮನವಿ ಮಾಡಿದ್ದಾರೆ. ಇನ್ನೊಂದು ಕಡೆ ಪರಮೇಶ್ವರ ಗೌಡ ನೇತೃತ್ವದಲ್ಲಿ ಲೆಕ್ಕ ಕೊಡಿ ಅಭಿಯಾನ ಆರಂಭವಾಗಿದ್ದು ಪಂಚಮಸಾಲಿ ಮಠಕ್ಕೆ ಕೋಟ್ಯಾಂತರ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. ದಾಖಲೆ ಮಟ್ಟಕ್ಕೆ ಸಂಗ್ರಹ ಆಗಿರುವ ದೇಣಿಗೆ ಬಗ್ಗೆ ಲೆಕ್ಕ ಕೊಡಿ ಎಂದು ಅಭಿಯಾನ ಶುರು ಮಾಡಿದ್ದಾರೆ. ಈ ವೇಳೆ ಗೇಟ್ ಬಳಿ ಇದ್ದಂತಹ ಭಕ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆಯಿತು.








