ಬೆಂಗಳೂರು: ಮದುವೆಯ ಸುಳ್ಳು ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಲಾಗಿದೆ ಎಂಬ ಆರೋಪದಡಿ ಪುರುಷರ ಮೇಲೆ ದಾಖಲಾಗುತ್ತಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಕರ್ನಾಟಕ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ:
ತನ್ನ ಸಹೋದ್ಯೋಗಿ ಮಹಿಳೆಯೊಂದಿಗೆ ಸುಮಾರು ಎಂಟು ತಿಂಗಳ ಕಾಲ ಸಂಬಂಧ ಹೊಂದಿದ್ದ 34 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಕೆಳಗಿನ ಮಹತ್ವದ ಅಂಶಗಳನ್ನು ಉಲ್ಲೇಖಿಸಿದೆ.ಅರ್ಜಿದಾರ ಮತ್ತು ದೂರುದಾರೆ ಮಹಿಳೆಯ ನಡುವಿನ ಸಂಬಂಧವು ಸಂಪೂರ್ಣ ಪರಸ್ಪರ ಸಮ್ಮತಿಯಿಂದ ಕೂಡಿದ್ದಾಗಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬ್ರೇಕಪ್ ನಂತರ ಕ್ರಿಮಿನಲ್ ಬಣ್ಣ: ಒಪ್ಪಿಗೆಯಿಂದ ನಡೆದ ಸಂಬಂಧವು ಮುರಿದು ಬಿದ್ದ ನಂತರ (Breakup), ಅದಕ್ಕೆ ಕ್ರಿಮಿನಲ್ ರೂಪ ನೀಡಿ ಪುರುಷರನ್ನು ಲಾಕಪ್‌ಗೆ ಕಳುಹಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ ಎಂದು ಕೋರ್ಟ್ ಹೇಳಿದೆ.
ಕಳೆದ 42 ದಿನಗಳಿಂದ ಜೈಲಿನಲ್ಲಿದ್ದ ವ್ಯಕ್ತಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 69 ರ ಅಡಿ ಮದುವೆಯ ಭರವಸೆ ನೀಡಿ ವಂಚಿಸುವುದು ಶಿಕ್ಷಾರ್ಹ ಅಪರಾಧ ಎಂಬುದನ್ನು ಒಪ್ಪಿಕೊಂಡ ಪೀಠವು, ಪ್ರಸ್ತುತ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯ ನಡೆದ ಉಲ್ಲೇಖವಿಲ್ಲ ಎಂದು ಸ್ಪಷ್ಟಪಡಿಸಿದೆ. ಸಂಬಂಧ ಕಡಿದುಹೋದ ನಂತರ ‘ಮದುವೆಯ ಭರವಸೆ ಉಲ್ಲಂಘನೆ’ ಎಂಬ ಅಂಶವನ್ನು ಸೇರಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ನ್ಯಾಯಪೀಠವು ಕಾನೂನಿನ ದುರ್ಬಳಕೆಯ ಬಗ್ಗೆ ಎಚ್ಚರಿಸಿದೆ.








