ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ. ವಿಶ್ವದ ಅತಿ ಪ್ರಮುಖ ತೈಲ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ಯಲ್ಲಿ (Strait of Hormuz) ಹಡಗುಗಳ ಮೇಲೆ ಯಾವುದೇ ರೀತಿಯ ಸುಂಕ (Toll) ವಿಧಿಸಲು ಅಥವಾ ಸಂಚಾರಕ್ಕೆ ಅಡ್ಡಿಪಡಿಸಲು ಅಮೆರಿಕಾ ಅವಕಾಶ ನೀಡುವುದಿಲ್ಲ ಎಂದು ಅವರು ಗುಡುಗಿದ್ದಾರೆ.
ಇತ್ತ ಇಸ್ಲಾಮಾಬಾದ್‌ನಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗಳು ನಡೆಯುತ್ತಿರುವಾಗಲೇ ಟ್ರಂಪ್ ಈ ಹೇಳಿಕೆ ನೀಡಿರುವುದು ಭಾರಿ ಮಹತ್ವ ಪಡೆದಿದೆ. “ಹಾರ್ಮುಜ್ ಜಲಸಂಧಿಯು ಅಂತರಾಷ್ಟ್ರೀಯ ಜಲಪ್ರದೇಶವಾಗಿದೆ, ಅಲ್ಲಿ ಇರಾನ್ ತನ್ನ ನಿಯಮಗಳನ್ನು ಹೇರಲು ಸಾಧ್ಯವಿಲ್ಲ” ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಜಗತ್ತಿನ ಒಟ್ಟು ತೈಲ ಪೂರೈಕೆಯ ಶೇ. 20ರಷ್ಟು ಭಾಗ ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಒಂದು ವೇಳೆ ಇರಾನ್ ಇಲ್ಲಿ ಹಡಗುಗಳನ್ನು ತಡೆದರೆ ಜಾಗತಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುವ ಆತಂಕವಿದೆ.
ಇಸ್ಲಾಮಾಬಾದ್‌ನಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದಲ್ಲಿ ನಡೆಯುತ್ತಿರುವ ಮಾತುಕತೆಯ ವೇಳೆ, ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಬೇಕು ಎಂಬುದು ಅಮೆರಿಕಾದ ಪ್ರಮುಖ ಶರತ್ತಾಗಿದೆ.
ಒಂದು ವೇಳೆ ಇರಾನ್ ಹಡಗುಗಳ ಮೇಲೆ ದಾಳಿ ನಡೆಸಿದರೆ ಅಥವಾ ಸುಂಕ ವಸೂಲಿಗೆ ಮುಂದಾದರೆ, ಅಮೆರಿಕಾ ಮಿಲಿಟರಿ ಶಕ್ತಿಯನ್ನು ಬಳಸಲು ಹಿಂದೆ ಸರಿಯುವುದಿಲ್ಲ ಎಂಬ ಮುನ್ಸೂಚನೆಯನ್ನು ಶ್ವೇತಭವನ ನೀಡಿದೆ.








