ಹೈದರಾಬಾದ್: ಪ್ರೀತಿಯನ್ನು ನಿರಾಕರಿಸಿದಳು ಎಂಬ ದ್ವೇಷದಿಂದ ಯುವತಿಗೆ ಬಲವಂತವಾಗಿ ತನ್ನದೇ ಎಚ್‌ಐವಿ (HIV) ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡಿದ್ದ ಆಘಾತಕಾರಿ ಘಟನೆಯಲ್ಲಿ, ನೊಂದ 24 ವರ್ಷದ ಯುವತಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್ ಸಮೀಪದ ಪೋಚರಂ ಐಟಿ ಕಾರಿಡಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಆರೋಪಿಯು ಯುವತಿಯ ಹತ್ತಿರದ ಸಂಬಂಧಿಯಾಗಿದ್ದನು. ಆತನ ಪೋಷಕರಿಗೆ ಎಚ್‌ಐವಿ ಇದ್ದ ಕಾರಣ, ಯುವತಿಯ ತಂದೆ ಆತನಿಗೆ ರಕ್ತ ಪರೀಕ್ಷೆ ಮಾಡಿಸಿದ್ದರು. ಪರೀಕ್ಷೆಯಲ್ಲಿ ಆತನಿಗೂ ಎಚ್‌ಐವಿ ಪಾಸಿಟಿವ್ ಇರುವುದು ದೃಢಪಟ್ಟಿದ್ದರಿಂದ ಯುವತಿಯ ಕುಟುಂಬ ಈ ಮದುವೆಯನ್ನು ನಿರಾಕರಿಸಿತ್ತು.
ಮದುವೆ ನಿರಾಕರಿಸಿದ್ದಕ್ಕೆ ಕೋಪಗೊಂಡ ಆರೋಪಿಯು ಮಾರ್ಚ್ 11ರಂದು ಯುವತಿ ಮನೆಯಲ್ಲಿ ಒಬ್ಬಳೇ ಇದ್ದಾಗ ನುಗ್ಗಿ, ಸಿರಿಂಜ್ ಮೂಲಕ ತನ್ನದೇ ರಕ್ತವನ್ನು ಆಕೆಗೆ ಬಲವಂತವಾಗಿ ಇಂಜೆಕ್ಟ್ ಮಾಡಿ ಪರಾರಿಯಾಗಿದ್ದನು.
ಈ ಘಟನೆಯ ನಂತರ ಯುವತಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ತನಗೂ ಸೋಂಕು ತಗುಲಿರಬಹುದು ಎಂಬ ಆತಂಕದಲ್ಲಿ ನೊಂದಿದ್ದ ಅವರು ಇಂದು ಬೆಳಿಗ್ಗೆ ತಮ್ಮ ಅಜ್ಜಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.








