ಧಾರ್: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಪತ್ನಿಯೊಬ್ಬಳು ತನ್ನ ಗಂಡನ ಬಣ್ಣದ ವಿಚಾರವಾಗಿ ಹೀಯಾಳಿಸಿ, ಕೊನೆಗೆ ತನ್ನ ಪ್ರೇಮಿಯೊಂದಿಗೆ ಸೇರಿ ಆತನನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣವು ಮೊದಲು ದರೋಡೆ ಎಂದು ಬಿಂಬಿತವಾಗಿದ್ದರೂ, ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಹೊರಬಿದ್ದಿದೆ.
ಮೃತ ದೇವಕೃಷ್ಣ ಎಂಬುವವರು ಸಾಂಬಾರ ಪದಾರ್ಥಗಳ ವ್ಯಾಪಾರಿಯಾಗಿದ್ದರು. ಇವರ ಪತ್ನಿ ಪ್ರಿಯಾಂಕಾ (27), ತನ್ನ ಪತಿಯ ಬಣ್ಣ ಕಪ್ಪಗಿದೆ ಎಂಬ ಕಾರಣಕ್ಕೆ ಸದಾ ಆತನನ್ನು ಹೀಯಾಳಿಸುತ್ತಿದ್ದಳು. “ನೀನು ಕಪ್ಪಗಿದ್ದೀಯ, ನನ್ನನ್ನು ಪಡೆಯಲು ನಿನಗೆ ಯೋಗ್ಯತೆಯಿಲ್ಲ” (Tum Kaale Ho, Don’t Deserve Me) ಎಂದು ಪದೇ ಪದೇ ಅಪಮಾನ ಮಾಡುತ್ತಿದ್ದಳು ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಶನಿವಾರ ತಡರಾತ್ರಿ ಪ್ರಿಯಾಂಕಾ ತನ್ನ ಪ್ರೇಮಿಯ ಸಹಾಯದೊಂದಿಗೆ ಪತಿಯನ್ನು ಕೊಲೆ ಮಾಡಿದ್ದಾಳೆ. ನಂತರ ಪೊಲೀಸರನ್ನು ದಾರಿ ತಪ್ಪಿಸಲು ಮನೆಯನ್ನು ಅಸ್ತವ್ಯಸ್ತಗೊಳಿಸಿ, “ಯಾರೋ ಅಪರಿಚಿತರು ಬಂದು ದರೋಡೆ ಮಾಡಿ ನನ್ನ ಪತಿಯನ್ನು ಕೊಂದಿದ್ದಾರೆ” ಎಂದು ಕಥೆ ಕಟ್ಟಿದ್ದಳು.
ಪೊಲೀಸರು ವಿಚಾರಣೆ ನಡೆಸಿದಾಗ ಪ್ರಿಯಾಂಕಾ ನೀಡಿದ ಹೇಳಿಕೆಗಳಲ್ಲಿ ಗೊಂದಲ ಕಂಡುಬಂದಿದೆ. ದರೋಡೆಯಾಗಿದೆ ಎಂದು ಆಕೆ ಹೇಳಿದ್ದ ಒಡವೆಗಳು ಮನೆಯೊಳಗೇ ಪತ್ತೆಯಾದಾಗ ಪೊಲೀಸರಿಗೆ ಸಂಶಯ ಬಂದಿದೆ. ತೀವ್ರ ವಿಚಾರಣೆ ನಡೆಸಿದಾಗ ಪ್ರೇಮಿಯೊಂದಿಗೆ ಸೇರಿ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ.
ಮೃತನ ಸಹೋದರಿ ಜ್ಯೋತಿ ನೀಡಿರುವ ಹೇಳಿಕೆಯ ಪ್ರಕಾರ, ಪ್ರಿಯಾಂಕಾಳಿಗೆ ಬೇರೆಯವನೊಂದಿಗೆ ಅಕ್ರಮ ಸಂಬಂಧವಿತ್ತು. ಇದನ್ನು ಮುಚ್ಚಿಹಾಕಲು ಮತ್ತು ತನ್ನ ಸೌಂದರ್ಯಕ್ಕೆ ಪತಿ ಸಮಾನನಲ್ಲ ಎಂಬ ಗರ್ವದಿಂದ ಈ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.








