ನವದೆಹಲಿ: ಬಂಗಾರದ ಮೇಲಿನ ಭಾರತೀಯರ ಪ್ರೀತಿ ಜಗತ್ತಿಗೇ ತಿಳಿದಿದೆ. ಆದರೆ ಈಗ ಹೊರಬಿದ್ದಿರುವ ವರದಿಯೊಂದು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಭಾರತದ ಮನೆಗಳಲ್ಲಿ ಸಂಗ್ರಹವಾಗಿರುವ ಚಿನ್ನದ ಪ್ರಮಾಣವು ವಿಶ್ವದ ಪ್ರಮುಖ 10 ರಾಷ್ಟ್ರಗಳ ಸೆಂಟ್ರಲ್ ಬ್ಯಾಂಕುಗಳ ಒಟ್ಟು ಮೀಸಲು ನಿಧಿಗಿಂತಲೂ ಹೆಚ್ಚಿದೆ ಎಂಬ ಅಚ್ಚರಿಯ ವಿಷಯ ವರದಿಯಾಗಿದೆ.
ವರದಿಯ ಪ್ರಕಾರ, ಭಾರತೀಯ ಕುಟುಂಬಗಳು ಅಂದಾಜು 25,000 ರಿಂದ 27,000 ಟನ್ ಚಿನ್ನವನ್ನು ಹೊಂದಿವೆ. ಇದು ವಿಶ್ವದ ಅತಿ ದೊಡ್ಡ ಖಾಸಗಿ ಚಿನ್ನದ ಸಂಗ್ರಹವಾಗಿದೆ.
ಅಮೆರಿಕಾ, ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ಸೇರಿದಂತೆ ವಿಶ್ವದ ಪ್ರಮುಖ 10 ದೇಶಗಳ ಕೇಂದ್ರೀಯ ಬ್ಯಾಂಕುಗಳ ಬಳಿ ಇರುವ ಒಟ್ಟು ಚಿನ್ನದ ಮೀಸಲು ನಿಧಿಗಿಂತಲೂ ನಮ್ಮ ದೇಶದ ಸಾಮಾನ್ಯ ಜನರ ಬಳಿ ಇರುವ ಚಿನ್ನವೇ ಅಧಿಕವಾಗಿದೆ.
ಭಾರತದಲ್ಲಿ ಚಿನ್ನವು ಕೇವಲ ಆಭರಣವಲ್ಲ, ಅದೊಂದು ಭದ್ರತೆಯ ಹೂಡಿಕೆಯಾಗಿದೆ. ಹಬ್ಬಗಳು, ಮದುವೆ ಮತ್ತು ಶುಭ ಸಮಾರಂಭಗಳಲ್ಲಿ ಚಿನ್ನ ಖರೀದಿಸುವ ಸಂಪ್ರದಾಯವೇ ಇಂದು ಭಾರತವನ್ನು ಈ ಸ್ಥಾನದಲ್ಲಿ ತಂದು ನಿಲ್ಲಿಸಿದೆ.
ದೇಶದ ಬ್ಯಾಂಕ್‌ಗಳಲ್ಲಿರುವುದಕ್ಕಿಂತ ಹೆಚ್ಚಿನ ಸಂಪತ್ತು ಜನರ ಕೈಯಲ್ಲಿದೆ ಎಂಬುದು ಈ ವರದಿಯ ಸಾರಾಂಶ. ಇದು ತುರ್ತು ಸಂದರ್ಭಗಳಲ್ಲಿ ದೇಶದ ಆರ್ಥಿಕತೆಗೆ ಅಘೋಷಿತ ಬೆನ್ನೆಲುಬಾಗಿ ನಿಲ್ಲುತ್ತದೆ.








