ಬೆಂಗಳೂರು : ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) 2025-26ನೇ ಸಾಲಿನಲ್ಲಿ 15,509 ದಶಲಕ್ಷ ಯೂನಿಟ್ ಜಲ ವಿದ್ಯುತ್ ಉತ್ಪಾದಿಸುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ಕರ್ನಾಟಕವು 3.63 ಗಿಗಾವ್ಯಾಟ್ ವಿದ್ಯುತ್ ನೊಂದಿಗೆ ಜಲ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಇತ್ತೀಚೆಗೆ ಕೇಂದ್ರದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ವರದಿ ನೀಡಿರುವ ಮಧ್ಯೆಯೇ 2025-26ನೇ ಸಾಲಿನಲ್ಲಿ ಕೆಪಿಸಿಎಲ್ ಈ ದಾಖಲೆ ನಿರ್ಮಿಸಿರುವುದು ಹೆಚ್ಚು ಮಹತ್ವ ಪಡೆದಿದೆ.
ಶರಾವತಿ ಕಣಿವೆಯಲ್ಲಿ ನಾಲ್ಕು, ಕಾಳಿ ಕಣಿವೆಯ ನಾಲ್ಕು, ವಾರಾಹಿ ಕಣಿವೆ ಮತ್ತು ಕಾವೇರಿ ಕಣಿವೆಯ ತಲಾ ಎರಡು, ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ತಲಾ ಒಂದು ವಿದ್ಯುತ್ ಉತ್ಪಾದನಾ ಸ್ಥಾವರಗಳಲ್ಲಿ 15,509 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. 2024-25ನೇ ಸಾಲಿನಲ್ಲಿ 13,853 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿರುವುದು ಇದುವರೆಗಿನ ದಾಖಲೆಯಾಗಿತ್ತು.
“ಕೆಪಿಸಿಎಲ್ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಶ್ರಮಿಸಿದೆ. ಶಿವನಸಮುದ್ರ, ಶಿಂಷಾ, ಶರಾವತಿ ಹಾಗೂ ಮಹಾತ್ಮ ಗಾಂಧಿ ಜಲ ವಿದ್ಯುತ್ ಕೇಂದ್ರದ ಕೆಲವು ಘಟಕಗಳು ರಾಜ್ಯದ ಅತ್ಯಂತ ಹಳೆಯ ಜಲವಿದ್ಯುತ್ ಕೇಂದ್ರಗಳಾಗಿದ್ದರೂ ಈ ಘಟಕಗಳ ಕಾರ್ಯಕ್ಷಮತೆ ಗಮನಾರ್ಹವಾಗಿದೆ. ಉತ್ತಮ ನಿರ್ವಹಣೆಯಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಸಾಧ್ಯವಾಗಿದೆ,” ಎಂದು ಕೆಪಿಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದ್ದಾರೆ.
ಶರಾವತಿ, ವಾರಾಹಿ ಕಣಿವೆಯಲ್ಲೂ ಹೊಸ ಮೈಲಿಗಲ್ಲು:
ರಾಜ್ಯದಲ್ಲಿ ಅತಿ ಹೆಚ್ಚು ಜಲ ವಿದ್ಯುತ್ ಉತ್ಪಾದನೆಯಾಗುವ ಶರಾವತಿ ಮತ್ತು ವಾರಾಹಿ ಕಣಿವೆಯ ವಿದ್ಯುತ್ ಸ್ಥಾವರಗಳಲ್ಲೂ 2025-26ನೇ ಸಾಲಿನಲ್ಲಿ ಒಟ್ಟಾರೆ 8,696 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ಮೂಲಕ ದಾಖಲೆ ನಿರ್ಮಿಸಲಾಗಿದೆ.
ಶರಾವತಿ ಕಣಿವೆಯಲ್ಲಿ 2025-26ನೇ ಸಾಲಿಗೆ ಸಿಇಎ 4800 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ನಿಗದಿಪಡಿಸಿದ್ದರೆ ಅದನ್ನು ಮೀರಿ 5642 ಮಿಲಿಯನ್ ಯೂನಿಟ್ (ಶೇ. 17.54ರಷ್ಟು ಹೆಚ್ಚು) ವಿದ್ಯುತ್ ಉತ್ಪಾದನೆಯಾಗಿದೆ. ಅದೇ ರೀತಿ ಮಹಾತ್ಮಾ ಗಾಂಧಿ ವಿದ್ಯುತ್ ಸ್ಥಾವರದಲ್ಲಿ ಸಿಇಎ 549 ದಶಲಕ್ಷ ಯೂನಿಟ್ ಉತ್ಪಾದನೆ ನಿಗದಿಪಡಿಸಿದ್ದರೆ ಅದನ್ನು ಮೀರಿ 643 (ಶೇ. 17.15ರಷ್ಟು ಹೆಚ್ಚು), ಗೇರುಸೊಪ್ಪದಲ್ಲಿ ಸಿಇಎ ಗುರಿ 1060 ದಶಲಕ್ಷ ಯೂನಿಟ್ ಇದ್ದರೆ, ಅದನ್ನು ಮೀರಿ 644 ದಶಲಕ್ಷ ಯೂನಿಟ್ (ಶೇ. 7.63ರಷ್ಟು ಹೆಚ್ಚು) ವರಾಹಿಯಲ್ಲಿ ಸಿಇಎ ಗುರಿ 1060 ದಶಲಕ್ಷ ಯೂನಿಟ್ ಇದ್ದರೆ, 1599 ದಶಲಕ್ಷ ಯೂನಿಟ್ (ಶೇ. 50.85ರಷ್ಟು ಹೆಚ್ಚು), ಭದ್ರಾನಲ್ಲಿ ಸಿಇಎ ಗುರಿ 55 ದಶಲಕ್ಷ ಯೂನಿಟ್ ಇದ್ದರೆ, 68 ದಶಲಕ್ಷ ಯೂನಿಟ್ (ಶೇ. 25.39ರಷ್ಟು ಹೆಚ್ಚು), ಶಿಂಷಾದಲ್ಲಿ ಸಿಇಎ ಗುರಿ 47 ದಶಲಕ್ಷ ಯೂನಿಟ್ ಇದ್ದರೆ, ಅದನ್ನು ಮೀರಿ 66 ದಶಲಕ್ಷ ಯೂನಿಟ್ (ಶೇ. 41.03ರಷ್ಟು ಹೆಚ್ಚು) ಹಾಗೂ ಮಾಣಿಯಲ್ಲಿ ಸಿಇಎ ಗುರಿ 24 ದಶಲಕ್ಷ ಯೂನಿಟ್ ಇದ್ದರೆ, 32 ದಶಲಕ್ಷ ಯೂನಿಟ್ (ಶೇ. 34.37ರಷ್ಟು ಹೆಚ್ಚು) ವಿದ್ಯುತ್ ಉತ್ಪಾದನೆ ಮಾಡಲಾಗಿದೆ.
ಇನ್ನು ಮೂರು ಮೂರು ಜಲ ವಿದ್ಯುತ್ ಸ್ಥಾವರಗಳ ವಿದ್ಯುತ್ ಉತ್ಪಾದನೆಯಲ್ಲಿ ಸಾರ್ವಕಾಲಿಕ ದಾಖಲೆ ಮಾಡಲಾಗಿದೆ. ಮಹಾತ್ಮಾ ಗಾಂಧಿ ವಿದ್ಯುತ್ ಸ್ಥಾವರದಲ್ಲಿ ಈ ಹಿಂದಿನ ಗರಿಷ್ಠ ದಾಖಲೆ 550 (2021-22ರಲ್ಲಿ) ದಶಲಕ್ಷ ಯೂನಿಟ್ ಇದ್ದರೆ, 2025-26ನೇ ಸಾಲಿನಲ್ಲಿ 643 ದಶಲಕ್ಷ ಯೂನಿಟ್ (ಶೇ. 16.92ರಷ್ಟು ಹೆಚ್ಚು), ಗೇರುಸೊಪ್ಪದಲ್ಲಿ ಈ ಹಿಂದಿನ ದಾಖಲೆ 641 (2007-08ರಲ್ಲಿ) ದಶಲಕ್ಷ ಯೂನಿಟ್ ಇದ್ದರೆ, ಈಬಾರಿ 644 ದಶಲಕ್ಷ ಯೂನಿಟ್ (0.39ರಷ್ಟು ಹೆಚ್ಚು) ಹಾಗೂ ವರಾಹಿಯಲ್ಲಿ ಈ ಹಿಂದಿನ ದಾಖಲೆ 1401 ದಶಲಕ್ಷ ಯೂನಿಟ್ (2007-08 ಇದ್ದರೆ, ಆ ಬಾರಿ 1599 ದಶಲಕ್ಷ ಯೂನಿಟ್ (ಶೇ. 14.13ರಷ್ಟು ಹೆಚ್ಚು) ವಿದ್ಯುತ್ ಉತ್ಪಾದನೆ ಮಾಡಲಾಗಿದೆ.
“ಕಳೆದ ವರ್ಷ ಸಾಕಷ್ಟು ಮಳೆ ಬಿದ್ದಿರುವುದರ ಜತೆಗೆ ವಿದ್ಯುತ್ ಸ್ಥಾವರಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿರುವುದರಿಂದ ರಾಜ್ಯದ ಜಲ ವಿದ್ಯುತ್ ಸ್ಥಾವರಗಳಲ್ಲಿ ದಾಖಲೆಯ ವಿದ್ಯುತ್ ಉತ್ಪಾದನೆಯಾಗಿದೆ. ಹೊಸ ಸಾಧನೆಗೆ ಕಾರಣೀಕರ್ತರಾದ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಅಭಿನಂದನಾರ್ಹರು”.- ಕೆ.ಜೆ.ಜಾರ್ಜ್, ಇಂಧನ ಸಚಿವರು
ಕೇರಳಂ ಬಾಲಕಿ ಶ್ರೀನಂದಾ ನಿಗೂಢ ಸಾವಿಗೆ ಬಿಗ್ ಟ್ವಿಸ್ಟ್: ತಂದೆ ಬೈದಿದ್ದಕ್ಕೆ ಆತ್ಮಹತ್ಯೆ ಶಂಕೆ
ಬೆಂಗಳೂರಲ್ಲಿ ‘ಝಾಂಬಿ ಡ್ರಗ್ಸ್’ ಸುಳ್ಳು ಸುದ್ದಿ: ವಿಡಿಯೋ ಹರಿಬಿಟ್ಟಿದ್ದ ಯುವಕ ಪೊಲೀಸ್ ವಶಕ್ಕೆ








