ನಂಜನಗೂಡು/ಮೈಸೂರು; ಅನಾರೋಗ್ಯದಿಂದ ಅನೇಕ ದಿನಗಳಿಂದ ಹಾಸಿಗೆ ಹಿಡಿದಿದ್ದ ನಂಜನಗೂಡು ತಾಲೂಕಿನ ಹುಲ್ಲಳ್ಳಿ ಗ್ರಾಮದ ಶ್ರೀಮತಿ ಪೂಜಾ (24) ಎಂಬುವವರ ನಿವಾಸಕ್ಕೆ ಭೇಟಿ ನೀಡಿದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಸಾಂತ್ವನ ಹೇಳಿದರು.
ಪೂಜಾ ಅವರ ಅನಾರೋಗ್ಯದ ಬಗ್ಗೆ ಯುವಕನೊಬ್ಬ ವೀಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿ, ಈ ವಿಡಿಯೋ ಕುಮಾರಸ್ವಾಮಿ ಅವರಿಗೆ ಮುಟ್ಟುವ ತನಕ ಶೇರ್ ಮಾಡಿ ಎಂದು ಸಾರ್ವಜನಿಕರನ್ನು ವಿನಂತಿ ಮಾಡಿದ್ದ. ಈ ವಿಡಿಯೋವನ್ನು ಗಮನಿಸಿದ್ದ ಕೇಂದ್ರ ಸಚಿವರು ಶುಕ್ರವಾರ ಖುದ್ದು ಅವರ ನಿವಾಸಕ್ಕೆ ತೆರಳಿ ಆರೋಗ್ಯದ ಸಮಸ್ಯೆಯನ್ನು ಅಳಿಸಿ ನೆರವಿನ ಹಸ್ತ ಚಾಚಿದರು.
ಸರಿಸುಮಾರು ಮುಕ್ಕಾಲು ಗಂಟೆ ಕಾಲ ಶ್ರೀಮತಿ ಪೂಜಾ, ಅವರ ಪತಿ ರವಿ, ಅವರ ತಂದೆ ಕುಮಾರ, ತಾಯಿ ಶೀಲಾ ಅವರೊಂದಿಗೆ ಚರ್ಚಿಸಿದ ಸಚಿವರು, ಕುಟುಂಬಕ್ಕೆ ಧೈರ್ಯ ಹಾಕಿ ನಿಮ್ಮ ಜತೆ ನಾನಿದ್ದೇನೆ ಎಂದು ತಿಳಿಸಿದರು. ತಮ್ಮ ಮನೆಗೆ ಕುಮಾರಸ್ವಾಮಿ ಬಂದ ಕೂಡಲೇ ಇಡೀ ಕುಟುಂಬ ಕಣ್ಣೀರಾಯಿತು. ಪೂಜಾ ಅವರು ಸಚಿವರನ್ನು ಕಂಡು ತೀವ್ರ ಭಾವೋದ್ವಗಕ್ಕೆ ತುತ್ತಾದರು.
ಅಲ್ಲದೆ, ಕುಟುಂಬದ ಪರಿಸ್ಥಿತಿಯ ಬಗ್ಗೆ ಸ್ಥಳೀಯರು ಹಾಗೂ ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು, ಪಂಚಾಯತ್ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದರಲ್ಲದೆ, ಪೂಜಾ ಅವರ ಆರೋಗ್ಯದ ಬಗ್ಗೆ ಅವರ ಪೋಷಕರಿಂದ ವಿವರ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಸಚಿವರು ಪೂಜಾ ಅವರ ಸಂಕಷ್ಟದ ಬಗ್ಗೆ ವಿಡಿಯೋ ಮಾಡಿ ಶೇರ್ ಮಾಡಿದ್ದ ಯುವಕ ಚೇತನ್ ಅವರನ್ನು ಶ್ಲಾಘಿಸಿದ ಕೇಂದ್ರ ಸಚಿವರು, ತನ್ನ ವಿಡಿಯೋ ನೋಡಿ ಪೂಜಾ ಅವರ ಮನೆಗೆ ಬಂದ ಸಚಿವರಿಗೆ ಆತ ಧನ್ಯವಾದ ಸಲ್ಲಿಸಿದರು.
ಪೂಜಾ ಅವರು ಬೆನ್ನಿನ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ತದ ನಂತರ ಆ ಚಿಕಿತ್ಸೆಯ ಅಡ್ಡ ಪರಿಣಾಮವಾಗಿ ಅವರ ಎರಡು ಕಾಲುಗಳು ಸಮಸ್ಯೆಗೆ ತುತ್ತಾಗಿವೆ. ಮೊದಲು ಅವರ ಒಂದು ಕಾಲಿಗೆ ಆಪರೇಷನ್ ಆಗಿತ್ತು. ಅದು ಸರಿ ಹೋಗಲಿಲ್ಲ, ಈಗ ಮತ್ತೊಂದು ಕಾಲಿಗೆ ಆಪರೇಷನ್ ಆಗಿದೆ. ಹಲವಾರು ತಿಂಗಳಿನಿಂದ ಪೂಜಾ ಅವರು ಹಾಸಿಗೆ ಹಿಡಿದಿದ್ದಾರೆ. ಅವರಿಗೆ ನಡೆಯಲು, ಎದ್ದು ಓಡಾಡಲು ಸಾಧ್ಯವಿಲ್ಲ. ಕುಟುಂಬ ತೀವ್ರ ಆರ್ಥಿಕ ಕಷ್ಟದಿಂದ ಬಳಲುತ್ತಿದೆ. ಈಗಾಗಲೇ ಹಲವು ಶಸ್ತ್ರಚಿಕಿತ್ಸೆಗಳು ನಡೆದಿದ್ದರೂ ಪೂಜಾ ಅವರಿಗೆ ಗುಣಮುಖ ಆಗಿಲ್ಲ. ಹುಲ್ಲಳ್ಳಿ ಗ್ರಾಮದಲ್ಲಿ ಸ್ವಂತ ಸೂರು ಇಲ್ಲದೆ ಕಷ್ಟಪಡುತ್ತಿರುವ ಕುಟುಂಬದ ಸ್ಥಳೀಯರು ಸಚಿವರಿಗೆ ಮಾಹಿತಿ ನೀಡಿದರು.
ಅಲ್ಲದೆ, ಮಗಳಿಗೆ ಚಿಕಿತ್ಸೆ ಕೊಡಿಸಲು ಸ್ವಂತ ಮನೆಯನ್ನು ಮತ್ತು ಇದ್ದ ಅಲ್ಪಸ್ವಲ್ಪ ಭೂಮಿಯನ್ನು ತಂದೆ ಮಾಡಿಕೊಂಡಿದ್ದಾರೆ. ಈಗ ವಾಸ ಇರುವ ಬಾಡಿಗೆ ಮನೆಗೆ ಬಾಡಿಗೆಯನ್ನು ಕಟ್ಟಲಾಗದೇ ಕುಟುಂಬ ಕಷ್ಟದಲ್ಲಿದೆ. ಅಲ್ಲದೆ, ಪತಿ ರವಿ ಕೂಡ ಕೆಎಸ್ಆರ್ಟಿಸಿ ಬಸ್ ಅಪಘಾತದಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ. ಅವರಿಗೂ ದುಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. ಅವರ ಮನವಿಗೆ ಮರುಗಿದ ಸಚಿವರು, ಸ್ಥಳದಲ್ಲಿಯೇ ಚಿಕಿತ್ಸೆಗೆ ಧನಸಹಾಯ ಮಾಡಿದರು.
ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ:
ಪೂಜಾ ಕುಟುಂಬಕ್ಕೆ ಗ್ರಾಮದಲ್ಲಿ ವಾಸಕ್ಕೆ ಸ್ವಂತ ಮನೆ ಇರುವುದಿಲ್ಲ. ಈ ಹಿನ್ನೆಯಲ್ಲಿ ಲೀಸಿಗೆ ಮನೆ ಕುಡಿಸುವುದಾಗಿ ಕುಟುಂಬಕ್ಕೆ ಸಚಿವರು ಭರವಸೆ ನೀಡಿದರು.
ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಮನೆಯ ವ್ಯವಸ್ಥೆ ಮಾಡಲು ಪ್ರಯತ್ನಿಸುವುದಾಗಿ ಭರವಸೆ ಕೊಟ್ಟ ಕೇಂದ್ರ ಸಚಿವರು, ಸ್ಥಳದಲ್ಲಿ ಇದ್ದ ಶಾಸಕ ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಶಾಸಕ ಮಹದೇವ್ ಮತ್ತು ಅಶ್ವಿನ್ ಅವರಿಗೆ ಜವಾಬ್ದಾರಿ ವಹಿಸಿದರು. ನಂಜನಗೂಡಿನ ಸ್ಥಳೀಯ ಮುಖಂಡರಿಗೆ ಕಾಲಕಾಲಕ್ಕೆ ಕುಟುಂಬದ ಬಗ್ಗೆ ಅವರ ಆಗುಹೋಗುಗಳ ಬಗ್ಗೆ ಮಾಹಿತಿ ಕೊಡಬೇಕೆಂದು ಸೂಚನೆ ಅವರು ಸೂಚನೆ ನೀಡಿದರು.
ಸಣ್ಣ ಎಂಚಿನ ಮನೆಯಲ್ಲಿ ವಾಸವಿರುವ ಕುಟುಂಬವು ಮಾಸಿಕ ₹3000 ಬಾಡಿಗೆ ಪಾವತಿಸುತ್ತದೆ. ಕೆಲವೊಮ್ಮೆ ಬಾಡಿಗೆ ಹಣ ಕಟ್ಟಲಿಕ್ಕೂ ಅವರು ಕಷ್ಟಪಡುತ್ತೇವೆ. ಮನೆಯ ಮಾಲೀಕ ಮನೆ ಖಾಲಿ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಅಲವತ್ತುಕೊಂಡಿತು ಕುಟುಂಬ.
ಇದೇ ವೇಳೆ ಪಾಂಡವಪುರದಲ್ಲಿ ನೆಲೆಸಿರುವ ಮನೆಯ ಮಾಲೀಕನಿಗೆ ಮೊಬೈಲ್ ಕರೆ ಮಾಡಿ ಮಾತನಾಡಿದ ಸಚಿವರು, ಮಾನವೀಯ ದೃಷ್ಟಿಯಿಂದ ಈ ಕುಟುಂಬಕ್ಕೆ ಸ್ವಲ್ಪ ದಿನ ಕಾಲಾವಕಾಶ ಕೊಡಿ. ಕೊನೆಪಕ್ಷ ಎರಡು ಮೂರು ವರ್ಷ ಲೀಸಿಗೆ ಮನೆ ಕೊಡಿ ಎಂದು ಕೋರಿದರು. ಅಲ್ಲದೆ, ಲೀಜಿನ ಮೊತ್ತವನ್ನು ಸ್ವತಹ ನಾನೇ ತುಂಬಿ ಕೊಡುವೆ ಎಂದು ಮನೆ ಮಾಲೀಕನಿಗೆ ತಿಳಿಸಿದರು. ಆದರೆ ಮನೆ ಮಾರುತ್ತಿರುವುದಾಗಿ ಮನೆ ಮಾಲೀಕ ಸಚಿವರಿಗೆ ತಿಳಿಸಿದರು.
ಅಂತಿಮವಾಗಿ ಪರ್ಯಾಯ ವ್ಯವಸ್ಥೆ ಮಾಡಲು ಮುಖಂಡರಿಗೆ ಸೂಚಿಸಿ ತಮಗೆ ಅಪ್ಡೇಟ್ ಮಾಡುವಂತೆ ಹೇಳಿದ ಸಚಿವರು, ಇವರ ಪರಿಸ್ಥಿತಿಯ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಸಿಇಓ ಅವರೊಂದಿಗೆ ಕೂಡ ಚರ್ಚೆ ನಡೆಸುವ ಭರವಸೆ ನೀಡಿದರು.
ಪೂಜಾ ಅವರ ಪತಿ ಆರೋಗ್ಯವೂ ಸರಿಯಿಲ್ಲ:
ತಮ್ಮ ಮಗಳ ಅನಾರೋಗ್ಯದ ಬಗ್ಗೆ ಸಚಿವರ ಬಳಿ ಹೇಳಿಕೊಂಡು ಕಣ್ಣೀರಿಟ್ಟ ತಂದೆ ತಾಯಿ, ಅಳಿಯನ ಆರೋಗ್ಯದ ಪರಿಸ್ಥಿತಿಯ ಬಗ್ಗೆ ಕೂಡ ದುಃಖ ತೋಡಿಕೊಂಡ ಕುಟುಂಬವು, ಅಳಿಯನಿಗೆ ಆಕ್ಸಿಡೆಂಟಾಗಿ ಬಹಳ ದಿನವಾಗಿದೆ, ವರ್ಷಗಳೇ ಕಳೆದರು ಈವರೆಗೂ ನ್ಯಾಯಾಲಯದಲ್ಲಿ ವಿಚಾರಣೆಗೆ ಕರೆದಿಲ್ಲ ಎಂದು ದುಃಖ ತೋಡಿಕೊಂಡರು. ತಕ್ಷಣವೇ ಸಂಬಂಧಪಟ್ಟ ವಕೀಲರ ಜೊತೆ ಮಾತನಾಡಿದ ಸಚಿವರು, ಸಂತ್ರಸ್ತ ಕುಟುಂಬಕ್ಕೆ ನೆರವಾಗುವಂತೆ ಕೋರಿದರು. ಬಳಿಕ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ ಮಾತನಾಡಿದ ಅವರು, ಕುಟುಂಬ ಕೇಸ್ ವಾಪಸ್ ತೆಗೆದುಕೊಳ್ಳುತ್ತದೆ. ಕೂಡಲೆ ತಮ್ಮಲ್ಲಿಗೆ ಕರೆಸಿ ಕುಟುಂಬಕ್ಕೆ ಪರಿಹಾರದ ವ್ಯವಸ್ಥೆ ಮಾಡಿಕೊಡಿ ಎಂದು ಸೂಚಿಸಿದರು.
ಸಚಿವರ ಮಾತಿಗೆ ಸಮ್ಮತಿಸಿ ಆದಷ್ಟು ಬೇಗ ಕುಟುಂಬಕ್ಕೆ ನೆರವಾಗುವುದಾಗಿ ಭರವಸೆ ಕೊಟ್ಟ ಕೆಎಸ್ ಆರ್ ಟಿಸಿ ಎಂಡಿ, ಲೋಕ ಅದಾಲತ್ ನಲ್ಲಿಯೇ ಪ್ರಕರಣಕ್ಕೆ ಮುಕ್ತಾಯ ಕಾಣಿಸಿ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಹೇಳಿದರು
ಸ್ಥಳದಲ್ಲಿ ಹಾಜರಿದ್ದ ತಹಸಿಲ್ದಾರ್ ಗೆ ಸೂಚನೆ ಕೊಟ್ಟ ಸಚಿವರು, ಕುಟುಂಬಕ್ಕೆ ಜೀವನಕ್ಕಾಗಿ ಒಂದು ಅಂಗಡಿಯನ್ನು ಹಾಕಿಕೊಡುವ ವ್ಯವಸ್ಥೆ ಮಾಡುವಂತೆ ಹೇಳಿದರು. ಅಲ್ಲದೆ, ಮೈಸೂರಿನಲ್ಲಿ ಪೂಜಾ ಮತ್ತು ಅವರು ಪತಿ ರವಿ ಅವರಿಗೆ ಚಿಕಿತ್ಸೆ ಕೊಡಿಸಲು ಪಕ್ಷದ ಮುಖಂಡರಿಗೆ ಸೂಚಿಸಿ ವ್ಯವಸ್ಥೆ ಮಾಡಿದರು ಸಚಿವರು.
ಸಚಿವರ ಸೂಚನೆ ಮೇರೆಗೆ ಪೂಜಾ ಅವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದಾಗಿ ವಿಧಾನ ಪರಿಷತ್ ಸದಸ್ಯಎಸ್ ಎನ್ ಮಂಜೇಗೌಡ ಭರವಸೆ ನೀಡಿದರು. ಹುಣಸೂರು ಶಾಸಕ ಹರೀಶ್ ಗೌಡ ವಿಧಾನಸಭಾ ಸದಸ್ಯ ಸಿಎನ್ ಮಂಜೇಗೌಡ ಮಾಜಿ ಶಾಸಕರಾದ ಮಹದೇವು ಅಶ್ವಿನ್ ಕುಮಾರ್ ಸೇರಿದಂತೆ ಜೆಡಿಎಸ್ ಪಕ್ಷದ ಅನೇಕ ನಾಯಕರು ಹಾಜರಿದ್ದರು.
ಚಾಮುಂಡಿ ಬೆಟ್ಟ ಮತ್ತು ನಂಜನಗೂಡಿಗೆ ತೆರಳಿ ಪೂಜೆ ಸಲ್ಲಿಸಿದ ಸಚಿವರು
ಇಂದು ಬೆಳಗ್ಗೆ ಇಂದು ಬೆಳಗ್ಗೆ ಕೆಲಸ ಸಚಿವರು ಕುಟುಂಬ ಸಮೇತವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಯ ದರ್ಶನ ಪಡೆದರು. ತದನಂತರ ನಂಜನಗೂಡಿಗೆ ತೆರಳಿದ ಅವರು ಶ್ರೀ ನಂಜುಂಡೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು.
ತಮ್ಮ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಎರಡು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ಸಚಿವರು, ನಾಡಿಗೆ ಒಳ್ಳೆಯದಾಗಲಿ ಹಾಗೂ ಎಲ್ಲೆಡೆ ಸುಖ ಶಾಂತಿ ನೆಮ್ಮದಿ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.
BREAKING: ಬೆಂಗಳೂರು: ಮಾಜಿ ಕಾರ್ಪೊರೇಟರ್ ವಿರುದ್ಧ ವಂಚನೆ ಆರೋಪ: ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆಗೆ ಯತ್ನ!
ತನ್ನ ಪ್ರಾಣ ಕೊಟ್ಟು ಇಬ್ಬರಿಗೆ ಮರುಜನ್ಮ ನೀಡಿದ ಮಹಾದಾನಿ: ಈ ಹುಲಿಕಲ್ ಘಾಟಿಯ ರಿಯಲ್ ಹೀರೋ ಕಥೆ ಓದಿ!








