ಬೆಂಗಳೂರು: ರಾಜ್ಯದಲ್ಲಿ ಅರ್ಹತೆ ಇಲ್ಲದಿದ್ದರೂ ಬಿಪಿಎಲ್ (BPL) ಪಟ್ಟಿಯಲ್ಲಿರುವ ಸುಮಾರು 14 ಲಕ್ಷ ಕಾರ್ಡ್‌ದಾರರನ್ನು ಹಂತ ಹಂತವಾಗಿ ಎಪಿಎಲ್ (APL) ಪಟ್ಟಿಗೆ ವರ್ಗಾಯಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮ ಮೀರಿ ಸುಮಾರು 7 ಲಕ್ಷ ಎಪಿಎಲ್ ಕಾರ್ಡ್‌ದಾರರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಅನರ್ಹರನ್ನು ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ.
ಯಾವುದೇ ಕಾರಣಕ್ಕೂ ಅರ್ಹ ಬಿಪಿಎಲ್ ಕಾರ್ಡ್‌ದಾರರನ್ನು ಪಟ್ಟಿಯಿಂದ ಕೈಬಿಡುವುದಿಲ್ಲ. ಒಂದು ವೇಳೆ ಅರ್ಹರಾಗಿದ್ದರೂ ತಾಂತ್ರಿಕ ಕಾರಣಗಳಿಂದ ಅಥವಾ ತಪ್ಪಾಗಿ ಬಿಪಿಎಲ್ ಪಟ್ಟಿಯಿಂದ ಹೆಸರು ಹೊರಬಿದ್ದಿದ್ದರೆ, ಅಂತಹವರು ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಪರಿಶೀಲಿಸಿ ಅವರಿಗೆ ಮತ್ತೆ ಬಿಪಿಎಲ್ ಕಾರ್ಡ್ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಆಟೋ ಗ್ಯಾಸ್ ಕುರಿತು ಮನವಿ
ಆಟೋ ಓಡಿಸಿಕೊಂಡು ಜೀವನ ನಡೆಸುವವರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ‘ಆಟೋ ಗ್ಯಾಸ್’ ಅನ್ನು ಆದ್ಯತೆ ಮೇರೆಗೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುನಿಯಪ್ಪ ಅವರು ತಿಳಿಸಿದರು.








