ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರನೇ ಹಂತದ ಪರೀಕ್ಷೆ (Exam-3) ಇರುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐತಿಹಾಸಿಕ ಫಲಿತಾಂಶ: ಈ ಸಾಲಿನ ದ್ವಿತೀಯ ಪಿಯುಸಿ ‘ಪರೀಕ್ಷೆ-1’ ರಲ್ಲಿ ಅತ್ಯುತ್ತಮ ಮತ್ತು ಐತಿಹಾಸಿಕ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಮೂರನೇ ಪರೀಕ್ಷೆಯ ಅಗತ್ಯ ಕಂಡುಬರುತ್ತಿಲ್ಲ.
ಕಡಿಮೆ ಉತ್ತೀರ್ಣ ಪ್ರಮಾಣ: ಕಳೆದ ಬಾರಿ ‘ಪರೀಕ್ಷೆ-2’ ರಲ್ಲಿ ಶೇ. 8 ರಷ್ಟು ಫಲಿತಾಂಶ ಸುಧಾರಣೆಯಾಗಿದ್ದರೆ, ‘ಪರೀಕ್ಷೆ-3’ ರಲ್ಲಿ ಕೇವಲ ಶೇ. 1 ಕ್ಕಿಂತ ಸ್ವಲ್ಪ ಹೆಚ್ಚು ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದರು. ಅಲ್ಪ ಸಂಖ್ಯೆಯ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ನಡೆಸುವುದು ಅಪ್ರಸ್ತುತ ಎನಿಸಿದೆ.
ಸಮಯದ ಅಭಾವ: ಮೂರನೇ ಪರೀಕ್ಷೆಯ ಫಲಿತಾಂಶ ಬರುವ ಹೊತ್ತಿಗೆ ಸಿಇಟಿ (CET) ಫಲಿತಾಂಶ ಪ್ರಕಟವಾಗಿ, ಕೌನ್ಸೆಲಿಂಗ್ ಪ್ರಕ್ರಿಯೆಯೂ ಮುಗಿಯುತ್ತಿರುತ್ತದೆ. ಅಷ್ಟೇ ಅಲ್ಲದೆ, ಕಾಲೇಜುಗಳ ದಾಖಲಾತಿ ಪ್ರಕ್ರಿಯೆಯೂ ಪೂರ್ಣಗೊಂಡಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ.
ಮುಂದಿನ ನಡೆ:
ಸದ್ಯಕ್ಕೆ ‘ಪರೀಕ್ಷೆ-2’ ಮಾತ್ರ ನಡೆಯಲಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ತಮ್ಮ ಫಲಿತಾಂಶ ಸುಧಾರಿಸಿಕೊಳ್ಳಲು ಅವಕಾಶವಿದೆ. “ಈ ನಿರ್ಧಾರದ ಬಗ್ಗೆ ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡಲಾಗಿದ್ದು, ಇದು ಈ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ. ಮುಂದಿನ ದಿನಗಳಲ್ಲಿ ಅಗತ್ಯವೆನಿಸಿದರೆ ಸಿಎಂ ಅವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು,” ಎಂದು ಸಚಿವರು ತಿಳಿಸಿದ್ದಾರೆ.








