ಬೈರೂತ್:ಲೆಬನಾನ್ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್ ತನ್ನ ವಾಯುಸೇನೆಯ ದಾಳಿಯನ್ನು ತೀವ್ರಗೊಳಿಸಿದ್ದು, ಈ ಕಾರ್ಯಾಚರಣೆಯಲ್ಲಿ ಹಿಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ ನಯೀಮ್ ಖಾಸಿಮ್ ಅವರ ಸೋದರ ಸಂಬಂಧಿ (Nephew) ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆಯು ಪಶ್ಚಿಮ ಏಷ್ಯಾದಲ್ಲಿ ಉರಿಯುತ್ತಿರುವ ಸಂಘರ್ಷದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಇಸ್ರೇಲ್ ಸಶಸ್ತ್ರ ಪಡೆಗಳು ಬೈರೂತ್‌ನ ದಕ್ಷಿಣ ಉಪನಗರಗಳಲ್ಲಿ ಹಿಜ್ಬುಲ್ಲಾ ನಾಯಕರನ್ನು ಗುರಿಯಾಗಿಸಿಕೊಂಡು ನಡೆಸಿದ ಸರಣಿ ದಾಳಿಯಲ್ಲಿ ಈ ಘಟನೆ ಸಂಭವಿಸಿದೆ. ಮೃತನನ್ನು ನಯೀಮ್ ಖಾಸಿಮ್ ಅವರ ಆಪ್ತ ಸೋದರ ಸಂಬಂಧಿ ಎಂದು ಗುರುತಿಸಲಾಗಿದೆ.
ಹಿರಿಯ ನಾಯಕರನ್ನು ಒಂದೊಂದಾಗಿ ಹತ್ಯೆ ಮಾಡುತ್ತಿರುವ ಇಸ್ರೇಲ್, ಈಗ ಸಂಘಟನೆಯ ಉನ್ನತ ನಾಯಕತ್ವದ ಕುಟುಂಬ ಸದಸ್ಯರನ್ನೇ ಗುರಿಯಾಗಿಸಿಕೊಳ್ಳುತ್ತಿರುವುದು ಹಿಜ್ಬುಲ್ಲಾಗೆ ದೊಡ್ಡ ಆಘಾತ ನೀಡಿದೆ.
“ಭಯೋತ್ಪಾದಕ ಮೂಲಸೌಕರ್ಯ ಮತ್ತು ಅದರ ನಾಯಕತ್ವದ ಮೇಲೆ ನಾವು ನಿಖರವಾದ ದಾಳಿ ನಡೆಸುತ್ತಿದ್ದೇವೆ” ಎಂದು ಇಸ್ರೇಲ್ ರಕ್ಷಣಾ ಪಡೆ (IDF) ತಿಳಿಸಿದೆ.ಜನನಿಬಿಡ ಪ್ರದೇಶಗಳಲ್ಲಿ ಇಸ್ರೇಲ್ ನಡೆಸುತ್ತಿರುವ ಈ ರಕ್ತಪಾತವನ್ನು ಲೆಬನಾನ್ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ಅಂತರಾಷ್ಟ್ರೀಯ ಸಮುದಾಯದ ಮಧ್ಯಸ್ಥಿಕೆಗೆ ಮನವಿ ಮಾಡಿದೆ.








