ಬೆಂಗಳೂರು: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಆಟೋ ಗ್ಯಾಸ್ (LPG) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಸಾವಿರಾರು ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬೆನ್ನಲ್ಲೇ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಷಿ ಹಾಗೂ ಶೋಭಾ ಕರಂದ್ಲಾಜೆ ಅವರ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸರಣಿ ಪ್ರಶ್ನೆಗಳನ್ನು ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ನಿಮ್ಮ ‘ಟ್ವಿಟರ್ ಪಾಂಡಿತ್ಯ’ ಈಗ ಎಲ್ಲಿ ಅಡಗಿದೆ?
ಹಿಂದಿನ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆ ವಿರೋಧಿಸಿ ಬೀದಿಗಿಳಿಯುತ್ತಿದ್ದ ಬಿಜೆಪಿ ನಾಯಕರನ್ನು ಕುಟುಕಿದ ಸಚಿವರು, “ಬೆಂಗಳೂರಿನಲ್ಲಿ ಮೆಟ್ರೋ ದರ ಅಥವಾ ಇಂಧನ ದರ ಸ್ವಲ್ಪ ಏರಿಕೆಯಾದಾಗಲೂ ಅಬ್ಬರಿಸುತ್ತಿದ್ದ ನಿಮ್ಮ ಆಕ್ರೋಶ ಈಗ ಎಲ್ಲಿ ಮರೆಯಾಗಿದೆ? ಲಕ್ಷಾಂತರ ಆಟೋ ಚಾಲಕರು ಗ್ಯಾಸ್ ಸಿಗದೆ ಬೀದಿಯಲ್ಲಿ ಕಣ್ಣೀರು ಹಾಕುತ್ತಿದ್ದರೆ ನಿಮ್ಮ ಟ್ವಿಟರ್ ಪಾಂಡಿತ್ಯ ಎಲ್ಲಿ ಅಡಗಿದೆ?” ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಸಂಸದರೇ ಮತ್ತು ಕೇಂದ್ರ ಮಂತ್ರಿಗಳಾದ @nsitharaman, @JoshiPralhad, @ShobhaBJP ಅವರೇ,
ಬೆಂಗಳೂರಿನಲ್ಲಿ ಮೆಟ್ರೋ ದರ ಮತ್ತು
ಹಿಂದಿನ ಸರ್ಕಾರದ ಅವಧಿಯಲ್ಲಿ ಗ್ಯಾಸ್, ಪೆಟ್ರೋಲ್, ಡೀಸೆಲ್ ದರ ಸ್ವಲ್ಪ ಏರಿಕೆಯಾದಾಗಲೂ ಬೀದಿಗಿಳಿದು ಅಬ್ಬರಿಸುತ್ತಿದ್ದ ನೀವು, ಕೇಂದ್ರದ ವೈಫಲ್ಯ ಎಂದು ಬಣ್ಣಿಸಲು ಪದಗಳೇ ಸಾಲದಂತೆ… pic.twitter.com/JvysKd0GrL— Ramalinga Reddy (@RLR_BTM) April 9, 2026
ಸಚಿವರು ಎತ್ತಿರುವ ಪ್ರಮುಖ ಪ್ರಶ್ನೆಗಳು:
- ಅಸಡ್ಡೆ ರಾಜಕಾರಣ: ಲಕ್ಷಾಂತರ ಆಟೋ ಚಾಲಕರ ಮನೆಗಳ ಒಲೆ ಆರಿರುವುದು ನಿಮಗೆ ಕಾಣುತ್ತಿಲ್ಲವೇ? ಇದು ಬಡವರ ಮೇಲಿನ ಅಸಡ್ಡೆಯಲ್ಲದೆ ಮತ್ತೇನು?
- ಕೇಂದ್ರದ ವೈಫಲ್ಯ: ದೆಹಲಿಯಲ್ಲಿ ನಿಮ್ಮದೇ ಸರ್ಕಾರವಿದೆ, ಪೆಟ್ರೋಲಿಯಂ ಇಲಾಖೆಯೂ ನಿಮ್ಮದೇ ಕೈಯಲ್ಲಿದೆ. ಹೀಗಿದ್ದರೂ ಬೆಂಗಳೂರಿಗೆ ಗ್ಯಾಸ್ ಪೂರೈಸಲು ಮನವಿ ಮಾಡುವ ‘ತಾಕತ್ತು’ ನಿಮಗಿಲ್ಲವೇ?
- ಬಂಡಲ್ ಇಂಜಿನ್ ಸರ್ಕಾರ: ನಿಮ್ಮ ಹೈಟೆಕ್ ರಾಜಕೀಯಕ್ಕೆ ಆಟೋ ಚಾಲಕರ ಬೆವರಿನ ಬೆಲೆ ಗೊತ್ತಿಲ್ಲ. ನಿಮ್ಮ “ಬಂಡಲ್ ಇಂಜಿನ್” ಕೇಂದ್ರ ಸರ್ಕಾರ ಈಗ ತುಕ್ಕು ಹಿಡಿದಿದೆಯೇ?
- ಸುಳ್ಳು ಪ್ರಚಾರ: ವಾಸ್ತವದಲ್ಲಿ ಸಮಸ್ಯೆಗಳಿದ್ದರೂ ದೇಶದಲ್ಲಿ ಎಲ್ಲವೂ ಸರಿಯಿದೆ ಎಂದು ಸುಳ್ಳು ಹೇಳುತ್ತಿರುವುದು ಯಾಕೆ? ಎಂದು ರಾಮಲಿಂಗಾರೆಡ್ಡಿ ಕಿಡಿ ಕಾರಿದ್ದಾರೆ.
ಫೋಟೋ-ಆಪ್ ರಾಜಕೀಯಕ್ಕೆ ಜನ ನಮಸ್ಕಾರ ಹಾಕ್ತಾರೆ!
”ಬೆಂಗಳೂರು ನಿಮ್ಮ ಸಿನಿಮಾ ಸೆಟ್ ಅಲ್ಲ, ಇದು ಕೋಟಿ ಜನರ ಬದುಕಿನ ಕಣಜ. ಕೇವಲ ಪ್ರಚಾರದ ಪೋಸ್ಟರ್‌ಗಳಿಗೆ ನಿಮ್ಮ ಮುಖಗಳು ಸೀಮಿತವಾಗಬಾರದು. ಕೂಡಲೇ ದೆಹಲಿಯ ನಿಮ್ಮ ಯಜಮಾನರಿಗೆ ಪತ್ರ ಬರೆದು ಬೆಂಗಳೂರಿಗೆ ಬೇಕಾದ ಎಲ್‌ಪಿಜಿ ತರಿಸಿಕೊಡುವ ಕೆಲಸ ಮಾಡಿ. ನಿಮ್ಮ ಈ ‘ಫೋಟೋ-ಆಪ್ ರಾಜಕೀಯ’ಕ್ಕೆ ಸಾಮಾನ್ಯ ಜನ ಮತ್ತು ಆಟೋ ಚಾಲಕರು ದೊಡ್ಡ ನಮಸ್ಕಾರ ಹಾಕುವ ಕಾಲ ಹತ್ತಿರದಲ್ಲಿದೆ” ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಆಟೋ ಗ್ಯಾಸ್ ಸಿಗದೆ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಿರುವ ಚಾಲಕರ ಪರವಾಗಿ ಸಚಿವರು ಮಾಡಿರುವ ಈ ಪೋಸ್ಟ್ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.








