ಬೆಂಗಳೂರು: ಕೃಷಿ ಕಾಯಕದಲ್ಲಿ ತೊಡಗಿರುವಾಗ ಅನಿರೀಕ್ಷಿತವಾಗಿ ಸಂಭವಿಸುವ ಅಪಘಾತಗಳಿಂದ ತೊಂದರೆಗೆ ಸಿಲುಕುವ ರೈತ ಕುಟುಂಬಗಳಿಗೆ ನೆರವಾಗಲು ಕರ್ನಾಟಕ ಸರ್ಕಾರವು ‘ರೈತ ಸಂಜೀವಿನಿ’ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿ ಚಟುವಟಿಕೆಗಳ ಸಮಯದಲ್ಲಿ ಸಾವು ಅಥವಾ ಅಂಗವಿಕಲತೆ ಸಂಭವಿಸಿದಲ್ಲಿ ರೈತರಿಗೆ ಮತ್ತು ಅವರ ಕುಟುಂಬಕ್ಕೆ ಈ ಯೋಜನೆಯಡಿ ಆರ್ಥಿಕ ಭದ್ರತೆ ನೀಡಲಾಗುತ್ತಿದೆ.
ಯಾರು ಅರ್ಹರು?
ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (APMC) ವ್ಯಾಪ್ತಿಯಲ್ಲಿ ವಾಸವಾಗಿರುವ, 15 ರಿಂದ 60 ವರ್ಷ ವಯೋಮಿತಿಯೊಳಗಿನ ರೈತರು ಮತ್ತು ಅವರ ಕುಟುಂಬದ ಸದಸ್ಯರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ.
ಯಾವ ಸಂದರ್ಭಗಳಲ್ಲಿ ವಿಮೆ ಅನ್ವಯಿಸುತ್ತದೆ?
ಈ ಕೆಳಗಿನ ಕೃಷಿ ಸಂಬಂಧಿತ ಕೆಲಸಗಳ ವೇಳೆ ಅಪಘಾತ ಸಂಭವಿಸಿದರೆ ಪರಿಹಾರ ಪಡೆಯಬಹುದು:
ಹೊಲದ ಕೆಲಸ: ಉಳುಮೆ, ಬಿತ್ತನೆ, ಕಳೆ ತೆಗೆಯುವುದು, ಗೊಬ್ಬರ ಹಾಗೂ ಕ್ರಿಮಿನಾಶಕ ಸಿಂಪಡಣೆ ಮತ್ತು ಬೆಳೆ ಕಟಾವು ಮಾಡುವಾಗ.
ಸಾರಿಗೆ: ಕೃಷಿ ಉತ್ಪನ್ನಗಳನ್ನು ಎತ್ತಿನ ಗಾಡಿ ಅಥವಾ ಟ್ರ್ಯಾಕ್ಟರ್‌ಗಳ ಮೂಲಕ ಮಾರುಕಟ್ಟೆಗೆ ಸಾಗಿಸುವಾಗ ಅಥವಾ ಮರಳಿ ಬರುವಾಗ ಸಂಭವಿಸುವ ಅಪಘಾತಗಳು.
ತಯಾರಿ: ಬಣವೆ ಹಾಕುವುದು ಅಥವಾ ಕಣದಲ್ಲಿ ಒಕ್ಕಣೆ ಮಾಡುವಾಗ.
ಇತರ ಚಟುವಟಿಕೆ: ಕೃಷಿ ಉದ್ದೇಶಕ್ಕಾಗಿ ಬಾವಿ ಅಥವಾ ಕೊಳವೆ ಬಾವಿ ತೋಡುವಾಗ, ಹಾವು ಕಡಿತ ಅಥವಾ ವನ್ಯಜೀವಿಗಳ ದಾಳಿಗೊಳಗಾದಾಗ ಮತ್ತು ಜಾನುವಾರುಗಳನ್ನು ಮೇಯಿಸುವಾಗ ಅಥವಾ ಮಾರುಕಟ್ಟೆಗೆ ಸಾಗಿಸುವಾಗ ಸಂಭವಿಸುವ ಅವಘಡಗಳು.
ಪರಿಹಾರದ ಮೊತ್ತ ಎಷ್ಟು?
ಮರಣ ಹೊಂದಿದಲ್ಲಿ: ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಮೃತಪಟ್ಟರೆ ಅವರ ಕುಟುಂಬಕ್ಕೆ ₹1.00 ಲಕ್ಷ ಪರಿಹಾರ ನೀಡಲಾಗುತ್ತದೆ.
ಅಂಗವಿಕಲತೆ ಸಂಭವಿಸಿದಲ್ಲಿ: ಅಪಘಾತದ ತೀವ್ರತೆಗೆ ಅನುಗುಣವಾಗಿ ₹10,000 ರಿಂದ ₹50,000 ವರೆಗೆ ಆರ್ಥಿಕ ನೆರವು ಸಿಗಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಪಘಾತ ಸಂಭವಿಸಿದ 100 ದಿನಗಳ ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಅಪಘಾತಕ್ಕೊಳಗಾದ ವ್ಯಕ್ತಿ ಅಥವಾ ವಾರಸುದಾರರು ಸಂಬಂಧಪಟ್ಟ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (APMC) ಕಾರ್ಯದರ್ಶಿಯವರಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿಯೊಂದಿಗೆ ಅಗತ್ಯ ದಾಖಲೆಗಳು ಮತ್ತು ಭಾವಚಿತ್ರವನ್ನು ಲಗತ್ತಿಸಬೇಕು.
ಸಲ್ಲಿಸಿದ ಅರ್ಜಿಯನ್ನು ಸಮಿತಿಯು ಪರಿಶೀಲಿಸಿ, ಮಂಡಳಿಯ ವಿಭಾಗೀಯ ಕಚೇರಿಗೆ ಶಿಫಾರಸು ಮಾಡುತ್ತದೆ.
ಒಂದು ವೇಳೆ ಅರ್ಜಿ ತಿರಸ್ಕೃತಗೊಂಡರೆ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.
ಯಾವಾಗ ಪರಿಹಾರ ಸಿಗುವುದಿಲ್ಲ? (ಅನರ್ಹತೆಗಳು)
ಆತ್ಮಹತ್ಯೆ, ಮದ್ಯಪಾನ ಅಥವಾ ಮಾದಕ ದ್ರವ್ಯ ಸೇವನೆಯಿಂದಾದ ಅಪಘಾತ, ನೈಸರ್ಗಿಕ ಸಾವು, ಸಿಡಿಲು, ಪ್ರವಾಹದಂತಹ ನೈಸರ್ಗಿಕ ವಿಕೋಪಗಳು, ದಲಭೆ ಅಥವಾ ದಂಗೆಗಳಲ್ಲಿ ಪಾಲ್ಗೊಂಡಾಗ ಉಂಟಾಗುವ ಸಾವು/ಅಂಗವಿಕಲತೆಗೆ ಈ ಯೋಜನೆಯಡಿ ಪರಿಹಾರ ಸಿಗುವುದಿಲ್ಲ.









