ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸುವ ಮುನ್ನವೇ ದೇಶೀಯ ಕರೆನ್ಸಿ ರೂಪಾಯಿ ಮೌಲ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯವು 50 ಪೈಸೆ ಏರಿಕೆಯಾಗಿದ್ದು, ಪ್ರತಿ ಡಾಲರ್‌ಗೆ 92.56 ರೂಪಾಯಿ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ 2 ವಾರಗಳ ಕದನ ವಿರಾಮ ಮತ್ತು ಹಾರ್ಮುಜ್ ಜಲಸಂಧಿ ಮುಕ್ತವಾಗಿರುವುದು ರೂಪಾಯಿ ಮೌಲ್ಯ ಹೆಚ್ಚಲು ಪ್ರಮುಖ ಕಾರಣವಾಗಿದೆ. ಇದರಿಂದ ಜಾಗತಿಕ ತೈಲ ಬೆಲೆ ಇಳಿಕೆಯಾಗಿದ್ದು, ಡಾಲರ್ ಮೇಲಿನ ಒತ್ತಡ ಕಡಿಮೆಯಾಗಿದೆ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಸಮಿತಿಯು ರೆಪೋ ದರವನ್ನು (Repo Rate) ಯಥಾಸ್ಥಿತಿಯಲ್ಲಿ (ಶೇ. 5.25) ಕಾಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಈ ನಿರೀಕ್ಷೆಯು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ.ರೂಪಾಯಿ ಮೌಲ್ಯ ಏರಿಕೆಯಾಗುತ್ತಿದ್ದಂತೆ ಭಾರತೀಯ ಶೇರು ಮಾರುಕಟ್ಟೆಯಲ್ಲೂ ಪೂರಕ ವಾತಾವರಣ ಸೃಷ್ಟಿಯಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಅಂಕಗಳು ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $100 ಕ್ಕಿಂತ ಕೆಳಕ್ಕೆ ಇಳಿದಿರುವುದು ಮತ್ತು ರೂಪಾಯಿ ಬಲಗೊಂಡಿರುವುದು ಭಾರತದ ತೈಲ ಆಮದು ವೆಚ್ಚವನ್ನು ಕಡಿಮೆ ಮಾಡಲಿದ್ದು, ಹಣದುಬ್ಬರ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.








