ನ್ಯೂಯಾರ್ಕ್: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡಗಳು ಸದ್ಯಕ್ಕೆ ಸರಿದಿದ್ದು, ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ (Crude Oil Prices) ದಿಢೀರ್ ಕುಸಿತ ಕಂಡಿದೆ. ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ತೈಲ ಬೆಲೆಯು ಈಗ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕೆಳಕ್ಕೆ ಇಳಿದಿದ್ದು, ಜಾಗತಿಕ ಆರ್ಥಿಕತೆಗೆ ದೊಡ್ಡ ರಿಲೀಫ್ ಸಿಕ್ಕಿದೆ.
ಹಾರ್ಮುಜ್ ಜಲಸಂಧಿಯನ್ನು (Strait of Hormuz) ಸಂಚಾರಕ್ಕೆ ಮುಕ್ತಗೊಳಿಸಲು ಇರಾನ್ ಒಪ್ಪಿಕೊಂಡ ಬೆನ್ನಲ್ಲೇ ತೈಲ ಪೂರೈಕೆಯ ಆತಂಕ ದೂರವಾಗಿದೆ. ಇದು ಮಾರುಕಟ್ಟೆಯಲ್ಲಿ ಧನಾತ್ಮಕ ಸಂಚಲನ ಮೂಡಿಸಿದ್ದು, ಬೆಲೆಗಳು ಶೇ. 12ರಷ್ಟು ಕುಸಿತ ಕಂಡಿವೆ.
ನಿನ್ನೆಯವರೆಗೆ $120 ದಾಟಿದ್ದ ಬ್ರೆಂಟ್ ಕಚ್ಚಾ ತೈಲದ ಬೆಲೆ ಇಂದು ವಹಿವಾಟಿನ ಆರಂಭದಲ್ಲೇ $98ಕ್ಕೆ ಕುಸಿದಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯಟ್ (WTI) ಕೂಡ $94ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.
ತೈಲ ಬೆಲೆ ಇಳಿಕೆಯಾಗಿರುವುದು ಭಾರತದ ಪಾಲಿಗೆ ಶುಭ ಸುದ್ದಿಯಾಗಿದೆ. ಇದರಿಂದಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗುವ ಭೀತಿ ಸದ್ಯಕ್ಕೆ ತಪ್ಪಿದಂತಾಗಿದೆ. ಜೊತೆಗೆ ಆಮದು ವೆಚ್ಚವೂ ಕಡಿಮೆಯಾಗಲಿದೆ.
ಯುದ್ಧದ ಭೀತಿಯಿಂದ ಶೇರು ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಿದ್ದ ಹೂಡಿಕೆದಾರರು, ಈಗ ಕದನ ವಿರಾಮದ ಸುದ್ದಿಯಿಂದಾಗಿ ಮತ್ತೆ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದಾರೆ.






