ಇಡೀ ಜಗತ್ತು ಮೂರನೇ ಮಹಾಯುದ್ಧದ ಭೀತಿಯಲ್ಲಿದ್ದಾಗ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ನಡೆಸಬೇಕಿದ್ದ ಭೀಕರ ಬಾಂಬ್ ದಾಳಿಯನ್ನು 2 ವಾರಗಳ ಕಾಲ ಮುಂದೂಡಿದ್ದಾರೆ. ಟ್ರಂಪ್ ಅವರ ಈ ನಿರ್ಧಾರವನ್ನು ಇರಾನ್‌ನ ‘ಅತ್ಯುನ್ನತ ರಾಷ್ಟ್ರೀಯ ಭದ್ರತಾ ಮಂಡಳಿ’ (SNSC) ಸ್ವಾಗತಿಸಿದ್ದು, ಇದನ್ನು ತನ್ನ ಪಾಲಿನ “ಐತಿಹಾಸಿಕ ವಿಜಯ” ಎಂದು ಬಣ್ಣಿಸಿದೆ.
ದಾಳಿಗೆ ನೀಡಿದ್ದ ಗಡುವು ಮುಗಿಯಲು ಕೇವಲ ಒಂದೂವರೆ ಗಂಟೆ ಬಾಕಿ ಇರುವಾಗ ಟ್ರಂಪ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಮಾನವೀಯ ದೃಷ್ಟಿಯಿಂದ 14 ದಿನಗಳ ಕಾಲ ದಾಳಿಯನ್ನು ಸ್ಥಗಿತಗೊಳಿಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಈ ಕದನ ವಿರಾಮದ (Ceasefire) ಬದಲಾಗಿ ಇರಾನ್ ತನ್ನ ವಶದಲ್ಲಿರುವ ಹಾರ್ಮುಜ್ ಜಲಸಂಧಿಯನ್ನು (Strait of Hormuz) ತಕ್ಷಣವೇ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲು ಒಪ್ಪಿಕೊಂಡಿದೆ. ಇದು ಜಾಗತಿಕ ತೈಲ ಪೂರೈಕೆಗೆ ದೊಡ್ಡ ಸಮಾಧಾನ ತಂದಿದೆ.
ಇರಾನ್ ಸರ್ಕಾರದ ವಕ್ತಾರರು ಮಾತನಾಡಿ, “ಅಮೆರಿಕದ ಬೆದರಿಕೆಗೆ ನಾವು ಬಗ್ಗಲಿಲ್ಲ. ನಮ್ಮ ಅಚಲ ನಿಲುವು ಮತ್ತು ಸನ್ನದ್ಧತೆಯೇ ಅಮೆರಿಕವನ್ನು ಹಿಂದೆ ಸರಿಯುವಂತೆ ಮಾಡಿದೆ. ಇದು ಇರಾನ್ ಜನತೆಗೆ ಸಂದ ಜಯ” ಎಂದು ಹೇಳಿದ್ದಾರೆ.ಈ ನಿರ್ಣಾಯಕ ಸಮಯದಲ್ಲಿ ಇರಾನ್ ಪರವಾಗಿ ನಿಂತಿದ್ದ ಚೀನಾ ಮತ್ತು ರಷ್ಯಾ ದೇಶಗಳು ಸಹ ಈ 2 ವಾರಗಳ ಕಾಲಾವಕಾಶವನ್ನು ಶಾಂತಿ ಮಾತುಕತೆಗೆ ಬಳಸಿಕೊಳ್ಳುವಂತೆ ಸಲಹೆ ನೀಡಿವೆ.








