ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಸ್ಫೋಟಕ ಓಪನರ್ ಡೇವಿಡ್ ವಾರ್ನರ್ ಅವರು ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದ ಮೇಲೆ ಸಿಡ್ನಿಯ ಮರೂಬ್ರಾದಲ್ಲಿ ಬಂಧನಕ್ಕೊಳಗಾಗಿದ್ದಾರೆ. ರಸ್ತೆ ಬದಿಯ ಆಕಸ್ಮಿಕ ತಪಾಸಣೆಯ ವೇಳೆ (Random Breath Test) ವಾರ್ನರ್ ಅವರ ರಕ್ತದಲ್ಲಿ ಮದ್ಯದ ಪ್ರಮಾಣ ನಿಗದಿತ ಮಿತಿಗಿಂತ ದುಪ್ಪಟ್ಟು ಇರುವುದು ಪತ್ತೆಯಾಗಿದೆ.
ಏಪ್ರಿಲ್ 5ರ ಭಾನುವಾರ ಸಂಜೆ ಸಿಡ್ನಿಯ ಮರೂಬ್ರಾದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ, ವಾರ್ನರ್ ಚಲಾಯಿಸುತ್ತಿದ್ದ ವ್ಯಾನ್ ಅನ್ನು ನಿಲ್ಲಿಸಲಾಗಿತ್ತು. ಈ ವೇಳೆ ಅವರು ನಡೆಸಿದ ಪರೀಕ್ಷೆಯಲ್ಲಿ ವಾರ್ನರ್ ಅವರ ರಕ್ತದಲ್ಲಿ ಮದ್ಯದ ಪ್ರಮಾಣ 0.104 ಇರುವುದು ಕಂಡುಬಂದಿದೆ. ಇದು ಆಸ್ಟ್ರೇಲಿಯಾದಲ್ಲಿ ಅನುಮತಿಸಲಾದ ಕಾನೂನು ಮಿತಿಗಿಂತ ಎರಡು ಪಟ್ಟು ಹೆಚ್ಚು.
ತಪಾಸಣೆಯ ನಂತರ ವಾರ್ನರ್ ಅವರನ್ನು ಮರೂಬ್ರಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಬಳಿಕ ಅವರ ಮೇಲೆ ‘ಮಿಡಲ್ ರೇಂಜ್ ಡ್ರಿಂಕ್ ಡ್ರೈವಿಂಗ್’ ಕೇಸ್ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇವಿಡ್ ವಾರ್ನರ್ ಅವರು ಮೇ 7, 2026 ರಂದು ಸಿಡ್ನಿಯ ಡೌನಿಂಗ್ ಸೆಂಟರ್ ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (PSL) ಕರಾಚಿ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ವಾರ್ನರ್, ಪಂದ್ಯಗಳ ನಡುವಿನ ಬಿಡುವಿನ ವೇಳೆಯಲ್ಲಿ ಆಸ್ಟ್ರೇಲಿಯಾಕ್ಕೆ ಮರಳಿದ್ದರು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ.








