ಬೆಂಗಳೂರು: ರಾಪಿಡೋ ಆ್ಯಪ್ ಮೂಲಕ ಆಟೋ ಬುಕ್ ಮಾಡಿ, ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ವಾಹನ ಹಾಗೂ ಮೊಬೈಲ್ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಹಿನ್ನೆಲೆ:
ದಿನಾಂಕ 01/03/2026 ರಂದು ಬೆಳಿಗ್ಗೆ ದರ್ಶನ್ ಸಿ.ಆರ್ ಎಂಬುವವರು ತಮ್ಮ ಪ್ಯಾಸೇಂಜರ್ ಆಟೋ ರಿಕ್ಷಾದಲ್ಲಿ ಎಲೆಕ್ಟ್ರಾನಿಕ್ ಸಿಟಿ ಹುಸ್ಕೂರು ಬಳಿ ಇದ್ದಾಗ, ಇಬ್ಬರು ಅಪರಿಚಿತರು ರಾಪಿಡೋ ಆ್ಯಪ್ ಮೂಲಕ ಬೂದಿಗೆರೆ-ದೇವನಹಳ್ಳಿ ರಸ್ತೆಗೆ ಆಟೋ ಬುಕ್ ಮಾಡಿದ್ದರು. ದೇವನಹಳ್ಳಿ ಕಡೆಗೆ ಹೋಗುವ ಮಾರ್ಗ ಮಧ್ಯೆ ಜೊನ್ನಹಳ್ಳಿ ಗ್ರಾಮದ ಕೆ.ಐ.ಎ.ಡಿ.ಬಿ ಇಂಡಸ್ಟ್ರಿಯಲ್ ಏರಿಯಾದ ಮಿಲೇನಿಯಂ ಕಂಪನಿ ಪಕ್ಕದ ರಸ್ತೆಯಲ್ಲಿ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು. ಆರೋಪಿಗಳು ಚಾಲಕನಿಗೆ ಗಾಯಗೊಳಿಸಿ, ಅವರ ಬಳಿಯಿದ್ದ 02 ಮೊಬೈಲ್ ಫೋನ್‌ಗಳು, ಆಟೋ ರಿಕ್ಷಾ ಮತ್ತು ನಗದು ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯ ಬಂಧನ ಮತ್ತು ವಶಪಡಿಸಿಕೊಂಡ ಸ್ವತ್ತುಗಳು:
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಾರ್ಚ್ 25 ರಂದು ಹೆಚ್.ಎಸ್.ಆರ್ ಲೇಔಟ್ ಬಳಿಯ ನ್ಯೂ ಹೋಫ್ ಪೌಂಡೇಷನ್‌ನಲ್ಲಿ ಮೊದಲ ಆರೋಪಿ (A1) ಕನಿಷ್ ಕಪಿಲ್ ಹಿರಸ್ಕರ್ (21 ವರ್ಷ) ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತನಿಂದ ವಶಪಡಿಸಿಕೊಳ್ಳಲಾದ ವಸ್ತುಗಳು:
-
ಸುಮಾರು 2,50,000/- ರೂ. ಬೆಲೆ ಬಾಳುವ ಒಂದು ಪ್ಯಾಸೆಂಜರ್ ಆಟೋ ವಾಹನ.
-
ಸುಮಾರು 70,000/- ರೂ. ಬೆಲೆ ಬಾಳುವ 02 ಮೊಬೈಲ್ ಫೋನ್‌ಗಳು.
-
ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್ ಫೋನ್, ಒಂದು ಕಲ್ಲು ಮತ್ತು ಒಂದು ನೇಲ್ ಕಟರ್.
-
ಒಟ್ಟು ಅಂದಾಜು 3,20,000/- ರೂ. ಮೌಲ್ಯದ ಸ್ವತ್ತುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.
ಪೊಲೀಸ್ ತಂಡದ ಕಾರ್ಯಾಚರಣೆ:
ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಜಿ.ಕೆ ಮಿಥುನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಸಹಾಯಕ ಪೊಲೀಸ್ ಆಯುಕ್ತರಾದ ಮುರುಗೇಂದ್ರಯ್ಯ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಬಾಗಲೂರು ಇನ್ಸ್‌ಪೆಕ್ಟರ್ ಅಶೋಕ್ ಬಿ.ಎಸ್ ಅವರ ಉಸ್ತುವಾರಿಯಲ್ಲಿ ಪಿ.ಎಸ್.ಐ ಪೂಜೇರಿ ಬಾಳಯ್ಯ ಮತ್ತು ಸಿಬ್ಬಂದಿ ತಂಡ ಹಾಗೂ ಸಿ.ಡಿ.ಆರ್ ತಾಂತ್ರಿಕ ವಿಭಾಗದ ನೆರವಿನಿಂದ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಸ್ತುತ ಬಂಧಿತ ಆರೋಪಿ ಪೊಲೀಸ್ ಅಭಿರಕ್ಷೆಯಲ್ಲಿದ್ದು, ತಲೆಮರೆಸಿಕೊಂಡಿರುವ ಎರಡನೇ ಆರೋಪಿ (A2) ಪತ್ತೆಗಾಗಿ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾಲಕ್ಷ್ಮಿ ಮುಂದೆ ಒಂದೇ ಕರೆನ್ಸಿ ನೋಟಿನಲ್ಲಿ ಹೀಗೆ ಮಾಡಿ, ನಿಮ್ಮ ಆದಾಯವು 3 ಪಟ್ಟು ಹೆಚ್ಚುತ್ತೆ
BIG NEWS: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಈ ಗಂಭೀರ ಆರೋಪ ಮಾಡಿದ ಕೈ ಶಾಸಕ








