ಮೈಸೂರು : ಹುಣಸೂರಿನ ಪ್ರಾದೇಶಿಕ ಅರಣ್ಯ ವಿಭಾಗದ ಪಿರಿಯಾಪಟ್ಟಣ ತಾಲೂಕಿನ ಗುಳೆದಹಳ್ಳದ ಪ್ರದೇಶದಲ್ಲಿ ಸುಮಾರು 2 ವರ್ಷದ ಹೆಣ್ಣು ಚಿರತೆಯ ಶವವೊಂದು ಸೋಮವಾರ ಪತ್ತೆಯಾಗಿದೆ. ಈ ಚಿರತೆಯನ್ನು ಗುಂಡು ಹಾರಿಸಿ ಸಾಯಿಸಿರುವ ಶಂಕೆ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಸಚಿವ ಈಶ್ವರ್ ಖಂಡ್ರೆ ಅವರು ಆದೇಶಿಸಿದ್ದಾರೆ.
ವನ್ಯಜೀವಿ ಬೇಟೆಗೆ ಬಂದಿರುವ ಬೇಟೆಗಾರರು ನಾಡಬಂದೂಕಿನಿಂದ ಗುಂಡು ಹಾರಿಸಿರಬಹುದೆಂದು ಶಂಕಿಸಲಾಗಿದೆ. ಎರಡು ದಿನಗಳ ಹಿಂದೆ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಚಿರತೆಯ ಕಳೇಬರವು ಪತ್ತೆಯಾದ ಜಾಗಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹುಣಸೂರು ವಿಭಾಗದ ಪಿರಿಯಾಪಟ್ಟಣ ವ್ಯಾಪ್ತಿಯ ಗುಳೆದಹಳ್ಳದ ರಾಜ್ಯ ಅರಣ್ಯದಿಂದ 2 ಕಿಲೋಮೀಟರ್ ದೂರದಲ್ಲಿರುವ ಕೊಪ್ಪ ವಿಭಾಗದಲ್ಲಿ ಗುಂಡೇಟಿನಿಂದ ಚಿರತೆ ಸಾವಿಗೀಡಾಗಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಸೂಚನೆ ನೀಡಿರುವ ಅವರು, ಇಂದು ಬೆಳಗ್ಗೆ ಎರಡು ವರ್ಷ ವಯಸ್ಸಿನ ಹೆಣ್ಣು ಚಿರತೆಯೊಂದು ಗುಂಡೇಟಿನಿಂದ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು, ವನ್ಯಜೀವಿ ಅಂಗಾಂಗಕ್ಕಾಗಿ ಕಳ್ಳಬೇಟೆ ಇನ್ನೂ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುತ್ತಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಅವರು ಸೂಚಿಸಿದ್ದಾರೆ.








