ವಾಷಿಂಗ್ಟನ್: ಬಾಹ್ಯಾಕಾಶ ಸಂಶೋಧನೆಯಲ್ಲಿ ನಾಸಾ (NASA) ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ನಾಸಾದ ‘ಆರ್ಟೆಮಿಸ್-2’ (Artemis II) ಮಿಷನ್‌ನ ನಾಲ್ವರು ಗಗನಯಾತ್ರಿಗಳು ಭೂಮಿಯಿಂದ ಅತಿ ಹೆಚ್ಚು ದೂರ ಪ್ರಯಾಣಿಸಿದ ಮಾನವರು ಎಂಬ 56 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ 1970ರಲ್ಲಿ ಅಪೊಲೊ-13 ಮಿಷನ್ ನಿರ್ಮಿಸಿದ್ದ ದಾಖಲೆ ಈಗ ಇತಿಹಾಸದ ಪುಟ ಸೇರಿದೆ.
ಏಪ್ರಿಲ್ 6, 2026ರಂದು (ಸೋಮವಾರ), ಆರ್ಟೆಮಿಸ್-2 ರ ‘ಓರಿಯನ್’ (Orion) ನೌಕೆಯು ಭೂಮಿಯಿಂದ 2,52,760 ಮೈಲಿ (ಸುಮಾರು 4,06,778 ಕಿ.ಮೀ) ದೂರ ತಲುಪುವ ಮೂಲಕ ಹೊಸ ದಾಖಲೆ ಬರೆಯಿತು. ಇದು ಅಪೊಲೊ-13 ಮಿಷನ್‌ಗಿಂತ ಸುಮಾರು 4,111 ಮೈಲಿ ಹೆಚ್ಚು ದೂರವಾಗಿದೆ.
ಗಗನಯಾತ್ರಿಗಳಾದ ರೀಡ್ ವೈಸ್‌ಮನ್, ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಮತ್ತು ಜೆರೆಮಿ ಹ್ಯಾನ್ಸೆನ್ ಅವರು ಚಂದ್ರನ ಹಿಂಭಾಗದ (Far Side) ಮೂಲಕ ಹಾದುಹೋಗುವಾಗ ಈ ಮೈಲಿಗಲ್ಲು ತಲುಪಿದರು. ಈ ಸಮಯದಲ್ಲಿ ಚಂದ್ರನ ಮೇಲ್ಮೈಯಿಂದ ಅವರು ಕೇವಲ 4,070 ಮೈಲಿ ದೂರದಲ್ಲಿದ್ದರು.
ಚಂದ್ರನ ಹಿಂಭಾಗದಲ್ಲಿ ನೌಕೆಯು ಸಂಚರಿಸುವಾಗ ಸುಮಾರು 40 ನಿಮಿಷಗಳ ಕಾಲ ಭೂಮಿಯೊಂದಿಗಿನ ರೇಡಿಯೋ ಸಂಪರ್ಕ ಕಡಿತಗೊಂಡಿತ್ತು. ಈ ‘ಬ್ಲ್ಯಾಕ್‌ಔಟ್’ ಅವಧಿಯಲ್ಲೇ ನೌಕೆಯು ತನ್ನ ಗರಿಷ್ಠ ದೂರವನ್ನು ತಲುಪಿ, ಮರಳಿ ಭೂಮಿಯತ್ತ ಪ್ರಯಾಣ ಆರಂಭಿಸಿತು.
ಈ ದಾಖಲೆಯ ಬಗ್ಗೆ ಮಾತನಾಡಿದ ಕೆನಡಾದ ಗಗನಯಾತ್ರಿ ಜೆರೆಮಿ ಹ್ಯಾನ್ಸೆನ್, “ಈ ದಾಖಲೆಯು ಹೆಚ್ಚು ಕಾಲ ಉಳಿಯಬಾರದು, ಮುಂದಿನ ಪೀಳಿಗೆ ಇದನ್ನು ಶೀಘ್ರದಲ್ಲೇ ಮುರಿಯುವಂತಾಗಬೇಕು,” ಎಂದು ಆಶಯ ವ್ಯಕ್ತಪಡಿಸಿದರು.








