ಬೆಂಗಳೂರು: ರಾಜ್ಯದ ಜನತೆಗೆ ಸಾರಿಗೆ ಇಲಾಖೆಯು ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಸದ್ಯಕ್ಕೆ ಸರ್ಕಾರಿ ಸಾರಿಗೆ ಬಸ್ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರಿ ಬಸ್‌ಗಳ ಪ್ರಯಾಣ ದರವನ್ನು ಸದ್ಯಕ್ಕೆ ಏರಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಆಟೋ ಗ್ಯಾಸ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಅಭಾವವನ್ನು ಸರಿಪಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದರು.
ಸರ್ಕಾರಿ ಸಾರಿಗೆ ಬಸ್‌ಗಳಿಗೆ ಪೂರೈಕೆಯಾಗುವ ಡೀಸೆಲ್ ಬೆಲೆ ಹೆಚ್ಚಾಗಬಹುದು ಎಂಬ ಆತಂಕವಿತ್ತು. ಈ ನಿಟ್ಟಿನಲ್ಲಿ ಬೆಲೆ ಏರಿಕೆ ಮಾಡದಂತೆ ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಸಿ ಮನವಿ ಮಾಡಲಾಗಿತ್ತು.ಪ್ರಚಲಿತದಲ್ಲಿರುವ ಯುದ್ಧದ ಪರಿಸ್ಥಿತಿಯು ತಾತ್ಕಾಲಿಕವಾಗಿದ್ದು, ಇದರಿಂದ ಸಾರಿಗೆ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಪ್ರಯಾಣ ದರವನ್ನು ಸದ್ಯಕ್ಕೆ ಏರಿಸದಿರಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.








