ಸ್ಯಾನ್ ಫ್ರಾನ್ಸಿಸ್ಕೋ: ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನ ಮಾತೃಸಂಸ್ಥೆಯಾದ ಮೆಟಾ (Meta), ತನ್ನ ವೆಚ್ಚ ಕಡಿತದ ಕ್ರಮಗಳನ್ನು ಮುಂದುವರಿಸಿದ್ದು, ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ಸುಮಾರು 200 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಆರ್ಥಿಕ ಅನಿಶ್ಚಿತತೆ ಮುಂದುವರಿದಿರುವ ಬೆನ್ನಲ್ಲೇ ಮೆಟಾ ಈ ಕಠಿಣ ನಿರ್ಧಾರ ಕೈಗೊಂಡಿದೆ.
ವರದಿಗಳ ಪ್ರಕಾರ, ಈ ಉದ್ಯೋಗ ಕಡಿತವು ಪ್ರಮುಖವಾಗಿ ಸಾಫ್ಟ್ವೇರ್ ಎಂಜಿನಿಯರಿಂಗ್, ಪ್ರಾಡಕ್ಟ್ ಮ್ಯಾನೇಜ್ಮೆಂಟ್ ಮತ್ತು ಡಾಟಾ ಸೈನ್ಸ್ ವಿಭಾಗಗಳ ಮೇಲೆ ಪ್ರಭಾವ ಬೀರಲಿದೆ. ಅನುಭವಿ ನೌಕರರು ಮಾತ್ರವಲ್ಲದೆ ಮಧ್ಯಮ ಹಂತದ ಮ್ಯಾನೇಜರ್ಗಳೂ ಈ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.
ಸಂಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಲು ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ಅವರು ಕೈಗೊಂಡಿರುವ ‘ಇಯರ್ ಆಫ್ ಎಫಿಷಿಯನ್ಸಿ’ (Year of Efficiency) ಯೋಜನೆಯ ಭಾಗವಾಗಿ ಈ ಲೇಆಫ್ ನಡೆದಿದೆ.
ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಮೆನ್ಲೋ ಪಾರ್ಕ್ನಲ್ಲಿರುವ ಮೆಟಾ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಈಗಾಗಲೇ ಈ ಕುರಿತು ಅಧಿಕೃತ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.ಮೆಟಾ ಮಾತ್ರವಲ್ಲದೆ ಅಮೆಜಾನ್, ಗೂಗಲ್ ಮತ್ತು ಮೈಕ್ರೋಸಾಫ್ಟ್ನಂತಹ ದೈತ್ಯ ಕಂಪನಿಗಳು ಕೂಡ ಉದ್ಯೋಗ ಕಡಿತ ಮಾಡುತ್ತಿರುವುದು ಟೆಕ್ ವಲಯದಲ್ಲಿ ಆತಂಕ ಮೂಡಿಸಿದೆ.








