ವಾಷಿಂಗ್ಟನ್: ಇರಾನ್ ವಿರುದ್ಧ ‘ನರಕ ದರ್ಶನ’ ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಈಗ ಸ್ವದೇಶದಲ್ಲೇ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಟ್ರಂಪ್ ಅವರ ಮಾನಸಿಕ ಸಮತೋಲನ ತಪ್ಪಿದೆ ಎಂದು ಹಿರಿಯ ಸೆನೆಟರ್ ಬರ್ನಿ ಸ್ಯಾಂಡರ್ಸ್ ಸೇರಿದಂತೆ ಹಲವು ಡೆಮೋಕ್ರಾಟ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ಅಧ್ಯಕ್ಷರು ಯುದ್ಧೋನ್ಮಾದದ ಮಾತುಗಳನ್ನಾಡುತ್ತಿದ್ದಾರೆ ಎಂದು ಟೀಕಿಸಿರುವ ವಿರೋಧ ಪಕ್ಷದ ನಾಯಕರು, ಅವರನ್ನು ಅಧಿಕಾರದಿಂದ ಕೆಳಗಿಳಿಸಲು ’25ನೇ ತಿದ್ದುಪಡಿ’ (25th Amendment) ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದಾರೆ.
“ಡೊನಾಲ್ಡ್ ಟ್ರಂಪ್ ಒಬ್ಬ ನಿಯಂತ್ರಣ ತಪ್ಪಿದ ಹುಚ್ಚನಂತೆ (Unhinged madman) ವರ್ತಿಸುತ್ತಿದ್ದಾರೆ. ಅವರ ಅಸಂಬದ್ಧ ಪೋಸ್ಟ್‌ಗಳು ಮತ್ತು ಯುದ್ಧದ ಬೆದರಿಕೆಗಳು ಜಾಗತಿಕ ಶಾಂತಿಗೆ ಹಾಗೂ ಅಮೆರಿಕದ ಭದ್ರತೆಗೆ ಅಪಾಯಕಾರಿ” ಎಂದು ಸ್ಯಾಂಡರ್ಸ್ ಕಿಡಿಕಾರಿದ್ದಾರೆ.
ಅಮೆರಿಕ ಸಂವಿಧಾನದ 25ನೇ ತಿದ್ದುಪಡಿಯ ಪ್ರಕಾರ, ಒಬ್ಬ ಅಧ್ಯಕ್ಷರು ದೈಹಿಕವಾಗಿ ಅಥವಾ ಮಾನಸಿಕವಾಗಿ ಕರ್ತವ್ಯ ನಿರ್ವಹಿಸಲು ಅಶಕ್ತರಾಗಿದ್ದಾರೆ ಎಂದು ಕಂಡುಬಂದರೆ, ಅವರನ್ನು ಅಧಿಕಾರದಿಂದ ತೆಗೆದುಹಾಕಲು ಅವಕಾಶವಿದೆ. ಈಗ ಡೆಮೋಕ್ರಾಟ್‌ಗಳು ಇದನ್ನೇ ಅಸ್ತ್ರವನ್ನಾಗಿ ಬಳಸಲು ಮುಂದಾಗಿದ್ದಾರೆ.
ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ‘ನರಕ’ ತೋರಿಸುವುದಾಗಿ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಆಕ್ರಮಣಕಾರಿ ಧೋರಣೆಯು ಷೇರು ಮಾರುಕಟ್ಟೆ ಮತ್ತು ತೈಲ ಬೆಲೆಯ ಮೇಲೆ ಭಾರಿ ಹೊಡೆತ ನೀಡಿದೆ.








